ಜಿಲ್ಲೆ

ಗಾಂಜಾ ಮತ್ತಲ್ಲಿ ಆಸ್ಟ್ರೇಲಿಯಾ ಪ್ರಜೆಯ ದರೋಡೆ: ಮಾದಕ ವಸ್ತು ವಿರೋಧಿ ದಿನವೇ ಸಿಕ್ಕಿಬಿದ್ದ..

ಬೆಂಗಳೂರು: ಗಾಂಜಾ ಮತ್ತಿನಲ್ಲಿ ಆಸ್ಟ್ರೇಲಿಯಾ ಪ್ರಜೆಯನ್ನು ದರೋಡೆ ಮಾಡಿ ಆರೋಪಿಗಳ ಪೈಕಿ ಇನ್ನೊಬ್ಬ ವಿಶ್ವ ಮಾದಕ ವಸ್ತು ವಿರೋಧಿ ದಿನದಂದೇ ಸಿಕ್ಕಿಬಿದ್ದಿದ್ದಾನೆ. ಆಸ್ಟ್ರೇಲಿಯಾ ಪ್ರಜೆಗೆ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಹೇಳಿ ಮಾರ್ಗಮಧ್ಯೆ ಹಲ್ಲೆ ನಡೆಸಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿ.ಜೆ.ಹಳ್ಳಿ ನಿವಾಸಿ ಸರ್ಫ್ ಅಲಿಯಾಸ್ ಸರ್ಫುದ್ದೀನ್ (40) ಬಂಧಿತ. ಆರೋಪಿಯಿಂದ ವಿದೇಶಿ ಪ್ರಜೆಯಿಂದ ಕಸಿದುಕೊಂಡು ಹೋಗಿದ್ದ ಪಾಸ್‌ಪೋರ್ಟ್, ನಗದು, ಪರ್ಸ್ ಹಾಗೂ ಇತರೆ ದಾಖಲೆಗಳಿರುವ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ. ಶನಿವಾರ ಸೈಯದ್ ಇಮ್ರಾನ್ ಎಂಬಾತನನ್ನು ಬಂಧಿಸಲಾಗಿತ್ತು. ಆತ ನೀಡಿದ ಮಾಹಿತಿ ಮೇರೆಗೆ ಸರ್ಫುದ್ದೀನ್‌ನನ್ನು ಬಂಧಿಸಲಾಗಿದೆ. ಇತರೆ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ಆರೋಪಿಗಳು ಗಾಂಜಾ ಮತ್ತಿನಲ್ಲಿ ಕೃತ್ಯ ಎಸಗಿದ್ದಾರೆ. ಕದ್ದ ವಸ್ತುಗಳನ್ನು ಮಾರಾಟ ಮಾಡುವ ಮುನ್ನವೇ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಆಸ್ಟ್ರೇಲಿಯಾ ಮೂಲದ ಅಸೋ ಹ್ಯಾಂಜಿಹಿ ತನ್ನ ದೇಶದಲ್ಲಿ 2 ಕಂಪನಿಗಳ ಸಿಇಓ ಆಗಿದ್ದು, ಬೆಂಗಳೂರಿನಲ್ಲೂ ಶಾಖೆ ತೆರೆಯಲು ಮೇ 23ರಂದು ಬೆಂಗಳೂರಿಗೆ ಬಂದಿದ್ದು, ಮಾನ್ಯತಾ ಟೆಕ್ ಪಾರ್ಕ್ ಬಳಿಯ ಹೋಟೆಲ್‌ವೊಂದರಲ್ಲಿ ತಂಗಿದ್ದರು. ಮಾನ್ಯತಾ ಟೆಕ್ ಪಾರ್ಕ್ ಮತ್ತು ಶಿವಾಜಿನಗರದಲ್ಲಿ ತಮ್ಮ ಸಂಸ್ಥೆ ವಿ-ವರ್ಕ್ ಎಂಬ ಸಂಸ್ಥೆಯ ಶಾಖೆಗಳನ್ನು ತೆರೆಯಲು ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದರು. ಜೂನ್ 23ರಂದು ಬಾಡಿಗೆ ವಿಚಾರಕ್ಕೆ ಹೋಟೆಲ್ ಸಿಬ್ಬಂದಿ ಅಸೋ ಮೇಲೆ ಹಲ್ಲೆ ನಡೆಸಿ ಹೊರಗಡೆ ಹಾಕಿದ್ದರು. ಆಗ ಆರೋಪಿಗಳು ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ನಂಬಿಸಿ ಮಾರ್ಗ ಮಧ್ಯೆ ಹಲ್ಲೆ ನಡೆಸಿ ದರೋಡೆ ಮಾಡಿದ್ದರು. ಈ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.