ಯಾದಗಿರಿ: ಟ್ರ್ಯಾಕ್ಟರ್-ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಾಲಕ ಮೃತಪಟ್ಟು, ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ರಸ್ತಾಪೂರ ಕ್ರಾಸ್ನಲ್ಲಿ ನಡೆದಿದೆ.
ವಡಗೇರಾ ತಾಲ್ಲೂಕಿನ ಕೋಡಾಲ ಗ್ರಾಮದ ಮೆಹಬೂಬ್ (50) ಮೃತ ದುರ್ದೈವಿ. ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಹಪುರದಲ್ಲಿರುವ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಹಾಪುರ ತಾಲ್ಲೂಕಿನ ರಸ್ತಪೂರ ಕ್ರಾಸ್ನಲ್ಲಿ ಘಟನೆ ನಡೆದಿದ್ದು, ಬೈಕ್ ಡಿಕ್ಕಿ ಹೊಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ರಸ್ತೆ ಬದಿ ಉರುಳಿ ಬಿದ್ದಿದೆ. ಟ್ರ್ಯಾಕ್ಟರ್ ಉರುಳಿದ ಪರಿಣಾಮ ಅದರ ಅಡಿಯಲ್ಲಿ ಸಿಲುಕಿದ್ದ ಚಾಲಕ ಮೆಹಬೂಬ್ ಸ್ಥಳದಲ್ಲೇ ಅಸುನೀಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಶಹಾಪುರ ಠಾಣೆಯ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನೂ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.