ಜಿಲ್ಲೆ

2,468 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ

ಮೋಹನ್​ ಶೆಟ್ಟಿ

14ನೇ ಆವೃತ್ತಿಯ ಆಳ್ವಾಸ್ ಪ್ರಗತಿ ಸಂಪನ್ನ | 14,780 ಉದ್ಯೋಗಾಕಾಂಕ್ಷಿಗಳು ಭಾಗಿ

ಮೂಡುಬಿದಿರೆ(ದ.ಕ.): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿದ್ಯಾಗಿರಿ ಆವರಣದಲ್ಲಿ ನಡೆದ 2024ನೇ ಸಾಲಿನ 2 ದಿನದ ಬೃಹತ್ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ’ 2,468 ಆಕಾಂಕ್ಷಿಗಳಿಗೆ ಸ್ಥಳದಲ್ಲೇ ಉದ್ಯೋಗ ಅವಕಾಶ ನೀಡುವುದರೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಮೇಳದಲ್ಲಿ ಭಾಗವಹಿಸಿದ ಒಟ್ಟು 258 ಕಂಪನಿಗಳ ಪೈಕಿ 217 ಕಂಪನಿಗಳು 5,953 ಮಂದಿಯ ಶಾರ್ಟ್ ಲಿಸ್ಟ್ ಸಿದ್ಧಪಡಿಸಿ ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಉದ್ಯೋಗ ಮೇಳದ ಎರಡನೇ ದಿನ 1,542 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಒಟ್ಟು ಎರಡು ದಿನಗಳ ಉದ್ಯೋಗ ಮೇಳದಲ್ಲಿ 14,780 ಅಭ್ಯರ್ಥಿಗಳು ಭಾಗವಹಿಸಿದ್ದರು.

ಬೆಂಗಳೂರಿನ ಸರ್ಕಾರಿ ಎಸ್​ಕೆಎಸ್​ಜೆ ಟೆಕ್ನಾಲಜಿ ಇನ್​ಸ್ಟಿಟ್ಯೂಟ್ ಇಂಜಿನಿಯರಿಂಗ್ ಕಾಲೇಜಿನ 43 ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ಮೇರೆಗೆ ಆಳ್ವಾಸ್ ಸಂಸ್ಥೆ ವತಿಯಿಂದ ಉಚಿತ ವಾಹನ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿ, ಪ್ರಗತಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಇಲ್ಲಿನ ವಿದ್ಯಾರ್ಥಿಗಳು ಪ್ರತಿಷ್ಠಿತ ಇಜಿ ಇಂಡಿಯಾ, ಇಸಿಯಾ ಸಾಫ್ಟ್ ಹಾಗೂ ಫ್ಲಿಫ್​ಕಾರ್ಟ್ ಕಂಪನಿಗಳಿಗೆ ಉತ್ತಮ ವೇತನದೊಂದಿಗೆ ಆಯ್ಕೆಯಾಗಿದ್ದಾರೆ.

ಮೂಲತಃ ಪಡುಬಿದ್ರಿಯವರಾದ ಮುಂಬೈನ ಠಾಕೂರ್ ಕಾಲೇಜ್ ಆಫ್ ಇಂಜಿನಿಯರಿಂಗ್​ನ ವಿದ್ಯಾರ್ಥಿ ಶೌರ್ಯ ಪೂಜಾರಿ ಟೊಯೊಟೋ ಕಿಲೋಸ್ಕರ್ ಆಟೋ ಪಾರ್ಟ್ಸ್ ಕಂಪನಿಗೆ ವಾರ್ಷಿಕ 4.7 ಲಕ್ಷ ರೂ. ವೇತನದೊಂದಿಗೆ ಆಯ್ಕೆ ಯಾಗಿದ್ದಾರೆ. ದಾವಣಗೆರೆಯ ಪದವೀಧರ ಶರಣ ಬಣಕಾರ್ ಪ್ರತಿಷ್ಠಿತ ಕಂಪನಿ ಇನ್ ಫಾರ್ವ್ಯಾಟಿಕಾ ಕಂಪನಿಯಲ್ಲಿ ವಾರ್ಷಿಕ 4.2 ಲಕ್ಷ ರೂ. ವೇತನದೊಂದಿಗೆ ಆಯ್ಕೆಯಾಗಿದ್ದಾರೆ.

ಕಳೆದ ಬಾರಿ ಪ್ರಗತಿಯ ಅದ್ಭುತ ಅನುಭವದ ಮೇರೆಗೆ ಈ ವರ್ಷವೂ ನಮ್ಮ ಫ್ಯಾಕ್ಟ್​ಸೆಟ್ ಕಂಪನಿಯ ತಂಡ ಭೇಟಿ ನೀಡಿದ್ದೇವೆ. ಇಲ್ಲಿನ ಆತಿಥ್ಯ ನಮಗೆ ಹೆಚ್ಚು ಸಂತಸ ನೀಡಿದೆ. ಕಳೆದ ವರ್ಷವೂ ಪ್ರಗತಿಯಿಂದ ಹೆಚ್ಚು ವೇತನದೊಂದಿಗೆ ಹಲವಾರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಒಟ್ಟಾರೆ ಈ ಬಾರಿ 15ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಕಂಪನಿಗೆ ಸೇರ್ಪಡೆಯಾಗುತ್ತಾರೆ.

| ವೆಂಕಟ ಸತ್ಯಕೃಷ್ಣ ಫ್ಯಾಕ್ಟ್​ಸೆಟ್ ಸಂಸ್ಥೆಯ ಟ್ಯಾಲೆಂಟ್ ಅಕ್ವಿಸಿಷನ್ ಸ್ಪೆಷಲಿಸ್ಟ್

ಆಳ್ವಾಸ್ ಪ್ರಗತಿಯಂತಹ ಅದ್ಬುತ ಉದ್ಯೋಗ ಮೇಳವನ್ನು ಆಯೋಜಿಸಿ, ಕಂಪನಿಗಳ ಸದಸ್ಯರಿಗೆ ಹಾಗೂ ಉದ್ಯೋಗಾ ಕಾಂಕ್ಷಿಗಳಿಗೆ ಅತ್ಯುನ್ನತ ರೀತಿಯ ಅತಿಥಿ ಸತ್ಕಾರ ನೀಡಿ, ಉದ್ಯೋಗಾಕಾಂಕ್ಷಿ ಗಳಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ನೀಡಿದ ಕೆಲಸ ನಿಜಕ್ಕೂ ಶ್ಲಾಘನೀಯ. ಒಂದೇ ವೇದಿಕೆಯಲ್ಲಿ ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳು ಸಿಗುವುದು ನಿಜಕ್ಕೂ ವಿಶೇಷ. ಮುಂದಿನ ವರ್ಷದಲ್ಲಿಯೂ ಇಂತಹ ಬೃಹತ್ ಉದ್ಯೋಗ ಮೇಳದಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳುತ್ತೇವೆ.

| ಸತ್ಯನಾರಾಯಣ ದುರ್ಹಾಸ್ ಫ್ಯಾಕ್ಟ್​ಸೆಟ್​ನ ಅಸೋಸಿಯೇಟ್ ಆಪರೇಷನಲ್ ಮ್ಯಾನೇಜರ್ಆಳ್ವಾಸ್ ಪ್ರಗತಿ ವಿಶೇಷತೆಗಳು

  • ನಾರ್ಡಿಕ್ ಸಾಫ್ಟ್ ವೇರ್​ನ ಇಜಿ ಇಂಡಿಯಾ ಕಂಪನಿಯು 5.9 ಲಕ್ಷ ರೂ. ವಾರ್ಷಿಕ ವೇತನದೊಂದಿಗೆ ಜೂನಿಯರ್ ಸಾಫ್ಟ್​ವೇರ್ ಡೆವಲಪರ್ ಹುದ್ದೆಗಳಿಗೆ 28 ಇಂಜಿನಿಯರ್​ಗಳನ್ನು ನೇಮಿಸಿಕೊಂಡಿದೆ.
  • ಫ್ಯಾಕ್ಟ್​ಸೆಟ್ ಕಂಪನಿಯು 3.4 ಲಕ್ಷ ರೂ. ವಾರ್ಷಿಕ ಪ್ಯಾಕೇಜ್​ನೊಂದಿಗೆ 20 ರಿಸರ್ಚ್ ಅನಾಲಿಸ್ಟ್ ಹುದ್ದೆಗೆ ಆಯ್ಕೆ ಮಾಡಿದ್ದು, 13 ಅಭ್ಯರ್ಥಿಗಳನ್ನು 7.2 ಲಕ್ಷ ರೂ. ವಾರ್ಷಿಕ ವೇತನದೊಂದಿಗೆ ಅಡ್ವೈಸರ್ ಹುದ್ದೆಗೆ ಶಾರ್ಟ್​ಲಿಸ್ಟ್ ಮಾಡಿಕೊಂಡಿದೆ.
  • ಟೊಯೋಟಾ ಕಿಲೋಸ್ಕರ್ ಆಟೋ ಪಾರ್ಟ್ಸ್ ಪ್ರೖೆ.ಲಿ. 4.7 ಲಕ್ಷ ರೂ. ವಾರ್ಷಿಕ ವೇತನದೊಂದಿಗೆ 21 ಅಭ್ಯರ್ಥಿಗಳನ್ನುಗ್ರಾಜುಯೇಟ್ ಇಂಜಿನಿಯರ್ ಅಪ್ರೆಂಟಿಸ್​ಶಿಪ್ ಟ್ರೖೆನಿ ಹುದ್ದೆಗಳಿಗೆ ಆಯ್ಕೆ ಮಾಡಿದೆ.
  • ಮೈನಿ ಪ್ರೆಸಿಶನ್ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪನಿಯು ಗ್ರಾಜುಯೇಟ್ ಇಂಜಿನಿಯರ್ ಟ್ರೖೆನಿ ಹುದ್ದೆಗಳಿಗೆ 51 ಅಭ್ಯರ್ಥಿಗಳನ್ನು 3.2 ಲಕ್ಷ ರೂ. ವಾರ್ಷಿಕ ವೇತನಕ್ಕೆ ಆಯ್ಕೆ ಮಾಡಿದೆ.
  • ಟೆನೆಕೊ ಸಂಸ್ಥೆಯು 96 ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ಪದವೀಧರರನ್ನು ಗ್ರಾಜುಯೇಟ್ ಇಂಜಿನಿಯರ್ ಟ್ರೖೆನಿ ಹುದ್ದೆಗೆ ಆಯ್ಕೆ ಮಾಡಿದೆ.
  • = ಟೊಯೋಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೖೆ.ಲಿ., ಗ್ರಾಜುಯೇಟ್ ಇಂಜಿನಿಯರ್ ಅಪ್ರೆಂಟಿಸ್​ಶಿಪ್ ಟ್ರೖೆನಿ ಹುದ್ದೆಗೆ 12 ಅಭ್ಯರ್ಥಿಗಳನ್ನು 4 ಲಕ್ಷ ರೂ. ವಾರ್ಷಿಕ ವೇತನಕ್ಕೆ ಆಯ್ಕೆ ಮಾಡಿದೆ.

ಮಂಗಳೂರಿನ ಎಜೆಐಇಟಿಯಲ್ಲಿ ಬಿ.ಇ ಪದವಿ ಪಡೆದ ನಾನು ಕಳೆದ ನಾಲ್ಕು ತಿಂಗಳಿಂದ ಉದ್ಯೋಗದ ಕೊರತೆ ಎದುರಿಸುತ್ತಿದ್ದೆ. ಅನೇಕ ಸವಾಲನ್ನು ಹೊಂದಿರುವ ಮಾರುಕಟ್ಟೆಯಲ್ಲಿ ಇಂತಹ ದೊಡ್ಡ ಉದ್ಯೋಗಾವಕಾಶವನ್ನು ಆಯೋಜಿಸಲು ಮತ್ತು ಉದ್ಯೋಗದ ಅಗತ್ಯವಿರುವ ಅನೇಕ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ನೀಡಿದ ಆಳ್ವಾಸ್ ತಂಡಕ್ಕೆ ಕೃತಜ್ಞಳಾಗಿದ್ದೇನೆ.

| ತಸ್ಮಿಯಾ ಝುುಲೆಕಾ ಮಂಗಳೂರು