ಕಡಬ: ತಾಲೂಕು ಆಲಂಕಾರು ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಆ.24ರಂದು ಸಂಘದ ಮುಖ್ಯ ಕಚೇರಿಯಲ್ಲಿರುವ ದೀನದಯಾಳ್ ರೈತ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ ಹೇಳಿದರು.
ಸಂಘದ ಮುಖ್ಯ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
48 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸಂಘವು ಹಿರಿಯ ಸಹಕಾರಿಗಳು ಮತ್ತು ಸದಸ್ಯರ ಸಹಕಾರ ಹಾಗೂ ಮಾರ್ಗದರ್ಶನದಿಂದ ಸಹಕಾರ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯೊಂದಿಗೆ ಮಹತ್ತರ ಮೈಲುಗಲ್ಲು ದಾಟಿ ಮುಂದುವರಿಯುತ್ತಿದೆ. ವರ್ಷಾಂತ್ಯದಲ್ಲಿ ಸಂಘವು 91.39 ಕೋಟಿ ರೂ. ಠೇವಣಿ ಹೊಂದಿದೆ. ವರದಿ ವರ್ಷದಲ್ಲಿ 131.22 ಕೋಟಿ ರೂ. ಸಾಲವನ್ನು ವಿವಿಧ ಉದ್ದೇಶಗಳಿಗೆ ವಿತರಿಸಿದ್ದು, ಸದಸ್ಯರ ಸಾಲದ ಹೊರಬಾಕಿ 146.36 ಕೋಟಿ ರೂ. ಇದ್ದು, ಸಾಲ ಶೇ.98.56 ವಸೂಲಾಗಿರುತ್ತದೆ. 553.28 ಕೋಟಿ ರೂ. ಒಟ್ಟು ವ್ಯವಹಾರ ಮಾಡಲಾಗಿದೆ. ಗ್ರಾಹಕರು ಸಾಲವನ್ನು ಸಕಾಲಕ್ಕೆ ಮರುಪಾವತಿಸಿರುವುದರಿಂದ 2023-24ನೇ ಸಾಲಿನಲ್ಲಿ ಸಂಘ 2,03,80,158.13 ರೂ. ಲಾಭ ಗಳಿಸಲು ಶಕ್ತವಾಗಿದೆ. ಈ ಸಾಧನೆಗೆ ಸದಸ್ಯರು, ನಿರ್ದೇಶಕರ ಸಹಕಾರ, ಸಿಬ್ಬಂದಿಯ ಪ್ರಾಮಾಣಿಕ ಸೇವೆ ಕಾರಣವಾಗಿದೆ ಎಂದರು.
ಸಂಘದ ನಿರ್ದೇಶಕರಾದ ಜಿ.ಪಿ.ಶೇಷಪತಿ ರೈ, ಸುಧಾಕರ ಪೂಜಾರಿ, ರಾಮಚಂದ್ರ ಏಣಿತ್ತಡ್ಕ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ್ ಡಿ. ಉಪಸ್ಥಿತರಿದ್ದರು.
ಪ್ರಸಕ್ತ ಆಡಳಿತ ಮಂಡಳಿ ಮಾರ್ಚ್ 2020ರಲ್ಲಿ ಆಡಳಿತ ವಹಿಸಿಕೊಂಡಿದೆ. ಸಂಘದ ಸದಸ್ಯರಿಗೆ ವಿಮಾ ಸೌಲಭ್ಯ ಕಲ್ಪಿಸುವ ಸಲುವಾಗಿ ಸುವರ್ಣ ಸಹಕಾರ ನಿಧಿಯನ್ನು ಆಡಳಿತಾವಧಿಯಲ್ಲಿ ಅನುಷ್ಠಾನಗೊಳಿಸಲಾಗಿದ್ದು, ವರದಿ ಸಾಲಿನಲ್ಲಿ 19 ಅರ್ಹ ಸಾಲಗಾರ ರೈತ ಸದಸ್ಯರು 2,35,000 ರೂ. ಪರಿಹಾರ ಪಡೆದುಕೊಂಡಿದ್ದಾರೆ. ಹಳೆನೇರೆಂಕಿ ಭಾಗದ ರೈತರ ಅನುಕೂಲಕ್ಕಾಗಿ ಹಳೆನೇರೆಂಕಿ ಮುಖ್ಯ ಪೇಟೆಯಲ್ಲಿ ಜಾಗ ಖರೀದಿಸಿ ಸುಸಜ್ಜಿತ ಗೋದಾಮು ಹಾಗೂ ಶಾಖಾ ಕಟ್ಟಡ ನಿರ್ಮಿಸಲಾಗಿದೆ. ಶೀಘ್ರ ಲೋಕಾರ್ಪಣೆ ಮಾಡಲಾಗುವುದು. ಸಂಘದ ಮುಖ್ಯ ಕಚೇರಿ ಕಟ್ಟಡದಲ್ಲಿ ಲಿಫ್ಟ್ ಸೌಲಭ್ಯ ಅಳವಡಿಸಲಾಗಿದ್ದು, 24ರಂದು ಉದ್ಘಾಟಿಸಲಾಗುವುದು. ಕಳೆದ 4 ವರ್ಷಗಳಿಂದ ಸಂಘವು ಡಿಸಿಸಿ ಬ್ಯಾಂಕಿನಿಂದ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ ಎಂದು ಧರ್ಮಪಾಲ ರಾವ್ ಕಜೆ ಹೇಳಿದರು.
ಕೆಲವು ವರ್ಷಗಳಿಂದ ಹವಾಮಾನ ಆಧಾರಿತ ಬೆಲೆ ವಿಮೆಯಲ್ಲಿ ಸಂಘದ ವ್ಯಾಪ್ತಿಯ ರೈತರೆಲ್ಲರನ್ನು ಫಲಾನುಭವಿಯನ್ನಾಗಿಸುವ ಪ್ರಯತ್ನ ಸಫಲವಾಗಿದೆ. ಸಂಘದ ವ್ಯಾಪ್ತಿಯ ರೈತರಿಗೆ ಕಳೆದ ಬಾರಿ 10 ಕೋಟಿ ರೂ.ಗೂ ಮಿಕ್ಕಿ ಬೆಳೆ ವಿಮೆ ಮೊತ್ತ ಬಿಡುಗಡೆಯಾಗಿದೆ. ಈ ಸಾಧನೆಗೆ ಜಿಲ್ಲೆಯಲ್ಲಿ ಹೆಗ್ಗಳಿಗೆ ಪಾತ್ರವಾಗಿದೆ ಎಂದು ಧರ್ಮಪಾಲ ರಾವ್ ಕಜೆ ಹೇಳಿದರು.