ಜಿಲ್ಲೆ

ಒಳಲಂಕೆ ದೇವಳ ಅಷ್ಟಮಂಗಲ ಪ್ರಶ್ನೆ ಸಂಪನ್ನ

ಸೌಮ್ಯ ಆರ್

ಮೂಲ್ಕಿ: ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಪ್ರಯುಕ್ತ ನಡೆಸಿದ ಅಷ್ಟಮಂಗಲ ಪ್ರಶ್ನಾ ಚಿಂತನೆ ಗುರುವಾರ ಸಂಜೆ ಸಂಪನ್ನಗೊಂಡು ದೇಗುಲದ ಸಮಗ್ರ ಜೀರ್ಣೋದ್ಧಾರಕ್ಕೆ ದೇವರಿಂದ ಅನುಜ್ಞೆ ಲಭ್ಯವಾಗಿದೆ.

ದೇವಳದ ಶ್ರೀ ಕಾಳಭೈರವ ದೇವ ದರ್ಶನದಲ್ಲಿ ನೀಡಿದ ಆದೇಶದಂತೆ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಾದದೊಂದಿಗೆ ಅಷ್ಟಮಂಗಲ ಪ್ರಶ್ನೆಗೆ ಬೇಳ ಪದ್ಮನಾಭ ಶರ್ಮ ನೇತೃತ್ವದಲ್ಲಿ ಐದು ದಿನ ನಡೆದು ಸಿಂಹ ರಾಶಿಯಲ್ಲಿ ಏಕಾದಶದಲ್ಲಿ ಗುರು ಮೂಡಿ ಅಪೂರ್ವ ಸಮಾಗಮದಲ್ಲಿ ಗ್ರಾಮದ ಅಭಿವೃದ್ಧಿಯ ಸಹಿತ ಕ್ಷೇತ್ರದ ಸಮಗ್ರ ಅಭಿವೃದ್ಧಿಯಾಗಲಿದೆ ಹಾಗೂ ಸೂಚಿಸಿದ ಕೆಲವು ಪರಿಹಾರ ನಡೆಸಿದಲ್ಲಿ ಬಹಳ ಸುಂದರ ದೇವಾಲಯ ನಿರ್ಮಾಣಗೊಂಡು ಬಹುವೈಭವದಿಂದ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ಗುರುವಾರ ನಡೆದ ಪ್ರಶ್ನಾ ಚಿಂತನೆಯಲ್ಲಿ ಬೇಳ ಪದ್ಮನಾಭ ಶರ್ಮ ತಿಳಿಸಿದ್ದಾರೆ.

ಚೊಟ್ಟನಿಕ್ಕಾರ ಅರಯನ್ಕಾವು ಹರಿದಾಸನ್ ನಂಬೂದರಿಪ್ಪಾಡ್, ವಡಕ್ಕರ ಚೋರೋಡು ಶ್ರೀನಾಥ ಪಣಿಕ್ಕರ್, ಕಣ್ಣನೂರು ಎಡಕ್ಕಾಡು ದೇವಿದಾಸ ಗುರುಕ್ಕಳ್, ಕೃಷ್ಣ ಪ್ರಸಾದ ರಂಗಾ ಭಟ್ಟ, ಪ್ರವೀಣ್ ತಂತ್ರಿ ಮಟ್ಟು ಕಟಪಾಡಿ, ಮುರಳೀಧರ ತಂತ್ರಿ ಉಡುಪಿ, ವಾಸುದೇವ ಭಟ್ ಪಾವಂಜೆ ತಂಡ ಅಷ್ಟ ಮಂಗಳ ಪ್ರಶ್ನಾ ಚಿಂತನೆಗೆ ಸಹಕಾರ ನೀಡಿದ್ದಾರೆ.

ಕ್ಷೇತ್ರದ ದೇವದರ್ಶನ ಪಾತ್ರಿ ಪಿ.ಸತ್ಯನಾರಾಯಣ ನಾಯಕ್, ಪರ್ಯಾಯ ಅರ್ಚಕ ಸಂಪಿಗೆ ಮನೆ ವಿಶ್ವನಾಥ ಭಟ್, ದೇವಳದ ಜೀರ್ಣೋದ್ಧಾರ ಪುನಃ ಪ್ರತಿಷ್ಠಾಪನಾ ಸಮಿತಿ ಸದಸ್ಯರು, ಆಡಳಿತ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.