ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ನಂದಿಕೂರು ವಿಶೇಷ ಆರ್ಥಿಕ ವಲಯ ಬಳಿ ಸ್ಥಾಪನೆಯಾಗಿರುವ ಬಯೋ ಡೀಸೆಲ್ ತಾಳೆ ಎಣ್ಣೆ ತಯಾರಿಕಾ ಘಟಕದಿಂದ ಹೊರಸೂಸುವ ದುರ್ವಾಸನೆಯಿಂದ ಪರಿಸರ ಮಾಲಿನ್ಯ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ವಿರೋಧಿಸಿ ಜುಲೈ 30ರಂದು ಕಂಪನಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ಪಲಿಮಾರು ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಂದಿಕೂರು ಶ್ರೀ ದುರ್ಗಾಪರಿಮೇಶ್ವರಿ ದೇವಸ್ಥಾನ ಪ್ರಾಂಗಣದಲ್ಲಿ ಶುಕ್ರವಾರ ಸಭೆಯಲ್ಲಿ ಪ್ರತಿಭಟನೆ ಸಹಿತ ವಿವಿಧ ನಿರ್ಣಯ ಕೈಗೊಳ್ಳಲಾಯಿತು.
ಎಂ11 ಘಟಕದ ಸುತ್ತಮುತ್ತ ಬಾವಿ ನೀರು ಕಲುಷಿತಗೊಂಡಿದ್ದು, ಈಗಾಗಲೇ ಹಲವರು ಬಾವಿ ನೀರನ್ನು ಪರೀಕ್ಷೆಗೊಳಪಡಿಸಿದ್ದು ಕುಡಿಯಲು ಅಯೋಗ್ಯವಾಗಿದೆ ಎಂಬ ವರದಿ ಸಿಕ್ಕಿದೆ. ಮುಖ್ಯವಾಗಿ ಸುತ್ತಲ ಗ್ರಾಮಗಳಲ್ಲಿ ನಿತ್ಯ ದುರ್ವಾಸನೆ ತುಂಬಿ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಎಂ 11 ಸಹಿತ ವಿಶೇಷ ಆರ್ಥಿಕ ವಲಯದ ಯಾವುದೇ ಕೈಗಾರಿಕೆಗಳ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ಮಹತ್ವದ ನಿರ್ಣಯ ಕೈಗೊಂಡು ಸಾಮೂಹಿಕ ನೆಲೆಯಲ್ಲಿ ಪರಿಣಾಮಕಾರಿ ಹೋರಾಟಕ್ಕೆ ಸಿದ್ಧತೆ ನಡೆಸಲಾಯಿತು.
ಮುಖ್ಯವಾಗಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, ರಾಜ್ಯ ಮಕ್ಕಳ ಮತ್ತು ಮಹಿಳಾ ಹಕ್ಕುಗಳ ಆಯೋಗಗಳಿಗೆ ಸ್ಥಳೀಯ ಸಮಸ್ಯೆಗಳ ದಾಖಲೆ ಸಹಿತ ದೂರು ನೀಡಲು ಸಭೆ ನಿರ್ಧರಿಸಿತು. ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಮಧ್ವರಾಯ ಭಟ್, ಪ್ರಮುಖರಾದ ನಾಗೇಶ್ ರಾವ್, ಲಕ್ಷ್ಮಣ್ ಎಲ್.ಶೆಟ್ಟಿವಾಲ್, ದಿನೇಶ್ ಪಲಿಮಾರು, ನವೀನಚಂದ್ರ ಸುವರ್ಣ, ನವೀನ್‌ಚಂದ್ರ ಜೆ.ಶೆಟ್ಟಿ, ಸಂದೀಪ್ ಪಲಿಮಾರು, ಗಾಯತ್ರಿ ಡಿ.ಪ್ರಭು, ಸತೀಶ್ ದೇವಾಡಿಗ, ಶ್ರೀನಿವಾಸ್ ಶರ್ಮ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸುಧೀರ್ ಕರ್ಕೇರ, ದೀಪಕ್ ಕಾಮತ್, ಪ್ರೇಮಾನಂದ ಕಲ್ಮಾಡಿ, ಗಿರೀಶ್ ಪಲಿಮಾರು, ಮಧುಕರ್ ಸುವರ್ಣ, ಸಂದೇಶ್ ಶೆಟ್ಟಿ, ಪ್ರತೀಕ್, ಉದಯ್ ರೈ, ಸತೀಶ್ ಶೆಟ್ಟಿ, ಅಶೋಕ್ ಪಾದೆಬೆಟ್ಟು, ಚಂದ್ರಹಾಸ್ ಶೆಟ್ಟಿ ಇನ್ನಾ, ಅಮರನಾಥ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಹರೀಶ್, ಪ್ರಸಾದ್ ಪಲಿಮಾರು, ರವೀಂದ್ರ ಪ್ರಭು ಸಾಂತೂರು, ಶಶಿಕಾಂತ್ ಪಡುಬಿದ್ರಿ ರಶ್ಮಿ ಪೂಜಾರಿ ಅಡ್ವೆ ಸನ್ನೋಣಿ, ಸುಜಾತಾ, ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಜಿತೇಂದ್ರ ಶೆಟ್ಟಿ ಉಪಸ್ಥಿತರಿದ್ದರು. ನಾಗರಾಜ್ ಭಟ್ ನಂದಿಕೂರು ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಟನೆಗೂ ಮೊದಲು ಪಲಿಮಾರು ಗ್ರಾಪಂಗೆ ವಿಶೇಷ ಗ್ರಾಮಸಭೆ ಕರೆದು ಕಂಪನಿ ವಿರುದ್ಧ ನಿರ್ಣಯ ಕೈಗೊಳ್ಳುವ ಬಗ್ಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಕಾನೂನು ಹೋರಾಟ ನಡೆಸಲು ಪರಿಸರದ ಅನುಭವಿಗಳು, ವಕೀಲರು ಒಳಗೊಂಡಂತೆ ಗ್ರಾಮ ಸಲಹಾ ಸಮಿತಿ ರಚನೆ, ಘಟಕ ಸುತ್ತಮುತ್ತಲಿನ ಪಡುಬಿದ್ರಿ, ಎಲ್ಲೂರು, ಇನ್ನಾ, ಹೆಜಮಾಡಿ ಗ್ರಾಪಂಯಲ್ಲೂ ವಿಶೇಷ ಗ್ರಾಮಸಭೆ ಕರೆದು ಘಟಕದ ವಿರುದ್ಧ ನಿರ್ಣಯ ಕೈಗೊಂಡು ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧರಿಸಲಾಯಿತು.