ಜಿಲ್ಲೆ

ಪಾಳುಬಿದ್ದ ಶೌಚಾಗೃಹ ಪರಿಶೀಲಿಸಿದ ಅಧಿಕಾರಿಗಳು

ಇಂದಿರಾ ಎನ್ ಕೆ

ಶಿರ್ವ: ಶಿರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಟ್ಲಗುರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲನಿಯಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಗೃಹ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿರುವ ಬಗ್ಗೆ ಆಗಸ್ಟ್ 24ರಂದು ವಿಜಯವಾಣಿ ಸಮಗ್ರ ವರದಿ ಪ್ರಕಟಿಸಿದ ಬೆನ್ನಲ್ಲೆ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.

ಉಡುಪಿ ತಾಲೂಕು ಪಂಚಾಯಿತಿಯ 2019-20ರ ಅನುದಾನದಲ್ಲಿ ಅಂದಾಜು 1 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಶೌಚಹಗೃಹಕ್ಕೆ ನೀರಿನ ಸಂಪರ್ಕ, ಬಯೋ ಪಿಟ್ ಸೇರಿದಂತೆ ಯಾವುದೇ ಮೂಲ ಸೌಲಭ್ಯಗಳಿಲ್ಲದೆ ಕಾಟಾಚಾರಕ್ಕೆ ತೊಟ್ಲಗುರಿ ಕಲ್ಲು ಬಂಡೆಯ ಮೇಲೆ ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.

ತೊಟ್ಲಗುರಿ ಭಾಗದ ಪ್ರತಿ ಮನೆಯಲ್ಲೂ ಶೌಚಗೃಹಗಳಿದ್ದರೂ ತಾಪಂ ಅನುದಾನ ಬಳಕೆಗಾಗಿ ಕಾಟಾಚಾರಕ್ಕೆ ಬರೀ ನಾಲ್ಕು ಗೋಡೆ ಹಾಗೂ ಬೇಸಿನ್ ಅಳವಡಿಸಿ ಕಾಮಗಾರಿ ಮಾಡಲಾಗಿತ್ತು. ಕಾಮಗಾರಿ ಪೂರ್ಣಗೊಳ್ಳದಿದ್ದರೂ ಬಿಲ್ ಪಾವತಿಯಾಗಿರುವುದು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ವಿಶೇಷ ಗ್ರಾಮ ಸಭೆಯಲ್ಲೂ ಚರ್ಚೆ ನಡೆದಿತ್ತು.

ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಕಾಪು ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಜಿ.ಪಂ. ಹಿರಿಯ ಸಹಾಯಕ ಇಂಜಿನಿಯರ್ ಶ್ರೀನಾಥ್ ನಾಯ್ಕ, ಶಿರ್ವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪಾಳುಬಿದ್ದಿರುವ ಶೌಚಗೃಹವನ್ನು ಪರಿಶೀಲಿಸಿದರು. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಮೂಲ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.

ವಿಜಯವಾಣಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಿ ಗಮನ ಸಳೆಯಲಾಗಿತ್ತು. ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿದ್ದು ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ. ಪವನ್ ಕುವಾರ್ ಶಿರ್ವ, ಗ್ರಾಮಸ್ಥರು.