ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ
ಮರುಡಾಂಬರು ಕಾಮಗಾರಿ ನಡೆದ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರದಿಂದ ಕುಂದಾಪುರ ತನಕ ಚತುಷ್ಪಥಕ್ಕೆ ರಾತ್ರಿ ಸಂಚಾರಕ್ಕೆ ಅನಿವಾರ್ಯವಾಗಿದ್ದ ಬಿಳಿ ಬಣ್ಣದ ಗುರುತು ಮಾಸಿಹೋಗಿದ್ದು, ಮತ್ತೆ ಅಳವಡಿಸದ ಕಾರಣ ಅಪಘಾತ ಹೆಚ್ಚಳಕ್ಕೆ ಕಾರಣವಾಗಿದೆ.
ಮಾಬುಕಳದಿಂದ ಕಲ್ಯಾಣಪುರ ತನಕ ಹಲವಾರು ತಿರುವುಗಳಿದ್ದು, ರಾತ್ರಿ ಹೊತ್ತು ದ್ವಿಚಕ್ರ ವಾಹನ ಸವಾರರು ಸೇರಿದಂತೆ ಘನವಾಹನ ಸಂಚಾರಕ್ಕೆ ಬೀದಿದೀಪ ಇಲ್ಲದ ಭಾಗದಲ್ಲಿ ರಸ್ತೆ ಕಾಣದೆ ಡಿವೈಡರ್‌ಗಳಿಗೆ ಡಿಕ್ಕಿ ಹೊಡೆದು ಒಂದೇ ತಿಂಗಳಲ್ಲಿ ಹಲವಾರು ಸಾವು ನೋವು ಸಂಭವಿಸಿದೆ.
ಮಾಬುಕಳ, ಉಪ್ಪಿನಕೋಟೆ, ಧರ್ಮಾವರ, ಆಕಾಶವಾಣಿ ವೃತ್ತ, ಬಸ್ ನಿಲ್ದಾಣ, ಹೇರೂರು, ಉಪ್ಪೂರು ಮತ್ತು ಕಲ್ಯಾಣಪುರ ಭಾಗದ ಕೆಲವು ಕಡೆಗಳಲ್ಲಿ ಅತಿ ಹೆಚ್ಚು ತಿರುವು ಇರುವ ಕಾರಣ ಅದೇ ಭಾಗದಲ್ಲಿ ಹೆಚ್ಚು ಅಪಘಾತ ಸಂಭವಿಸಿದೆ.
ರಸ್ತೆ ಡಾಂಬರು ಕಾಮಗಾರಿ ನಡೆದು ತಿಂಗಳಾಗುತ್ತಾ ಬಂದರೂ ಸಂಚಾರ ವ್ಯವಸ್ಥೆಗೆ ಅಗತ್ಯವಾದ ಡಾಂಬರಿಗೆ ಬಿಳಿ ಬಣ್ಣದ ಗುರುತು ಮತ್ತು ಕೆಂಪು ಬಣ್ಣದ ರಿಫ್ಲೆಕ್ಟರ್ ಅಳವಡಿಸಿಲ್ಲ. ಅದಿದ್ದರೆ ತಿರುವು ಗೋಚರಿಸಿ ಚಾಲಕರಿಗೆ ಅನುಕೂಲವಾಗುತ್ತದೆ.
ಈಗಾಗಲೇ ಮಳೆ ಆರಂಭವಾಗಿದ್ದು, ಡಾಂಬರು ಕಾಮಗಾರಿ ನಡೆದ ಭಾಗದಲ್ಲಿ ಬಿಳಿಬಣ್ಣದ ಗುರುತು ಹಾಕದಿದ್ದರೆ ಪ್ರತಿದಿನ ಸರಣಿ ಅಪಘಾತ ಸಂಭವಿಸಿ ಸಾವು ನೋವಿಗೆ ಕಾರಣವಾಗುತ್ತದೆ. ಸಂಬಂಧಪಟ್ಟವರು ಅತಿ ಶೀಘ್ರದಲ್ಲಿ ಕಾರ್ಯನ್ಮೋಖರಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ತಿರುವುಗಳಿದ್ದು, ಒಂದೇ ತಿಂಗಳಲ್ಲಿ ಹಲವಾರು ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇಂಜಿನಿಯರ್ ಅನಿರುದ್ಧ ಕಾಮತ್ ಎಂಬುವರಿಗೆ ಬಿಳಿ ಗುರುತು ಹಾಕುವಂತೆ ತಿಳಿಸಲಾಗಿದೆ. ಬೇಗನೆ ಮಾಡುವ ಭರವಸೆ ನೀಡಿದ್ದಾರೆ.-ದಿವಾಕರ ಪಿ., ಪೊಲೀಸ್ ವೃತ್ತ ನಿರೀಕ್ಷಕರು, ಬ್ರಹ್ಮಾವರ
ರಾಷ್ಟ್ರೀಯ ಹೆದ್ದಾರಿಯವರು ಮರು ಡಾಂಬರು ಕಾಮಗಾರಿ ನಡೆಸಿದ ಬಳಿಕ ಈ ಹಿಂದೆ ಇದ್ದಂತೆ ಸಂಚಾರಕ್ಕೆ ಅನುಕೂಲವಾಗುವ ಬಿಳಿ ಬಣ್ಣದ ಗುರುತುಗಳನ್ನು ಹಾಕದ ಕಾರಣ ರಾತ್ರಿ ಸಂಚಾರ ಮಾಡುವವರಿಗೆ ಸಮಸ್ಯೆಯಾಗಿದೆ. ತಿರುವು ಮತ್ತು ರಸ್ತೆ ಕಾಣದ ಕಾರಣ ಅನೇಕ ಭಾಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಸಾವು ನೋವು ಸಂಭವಿಸಿದೆ. ಆದಷ್ಟು ಬೇಗನೆ ಬಿಳಿ ಬಣ್ಣದ ಗುರುತು ಹಾಕಿ ಅಪಾಯ ತಪ್ಪಿಸಬೇಕಾಗಿದೆ.-ನವನೀತ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ, ಬ್ರಹ್ಮಾವರ