ಜಿಲ್ಲೆ

ಶಿರಸಿ-ಗೌರಿ ನಾಯ್ಕ ತೋಡಿದ ಬಾವಿಗೆ ಹಲಗೆ ಮುಚ್ಚಿದ ಅಧಿಕಾರಿಗಳು

ಶಿರಸಿ: ಇಲ್ಲಿಯ ಗಣೇಶನಗರದ ಅಂಗನವಾಡಿ ಆವರಣದಲ್ಲಿ ಜಲ ಸಾಧಕಿ ಗೌರಿ ನಾಯ್ಕ ಬಾವಿ ತೋಡುತ್ತಿರುವ ಕಾರ್ಯಕ್ಕೆ ಮತ್ತೆ ವಿಘ್ನ ಎದುರಾಗಿದೆ. ಅಽಕಾರಿಗಳು ಸೋಮವಾರ ಆಗಮಿಸಿ, ಬಾವಿ ತೋಡದಂತೆ ಮರದ ಹಲಗೆಗಳನ್ನು ಅಡ್ಡ ಇಟ್ಟು ಹೋಗಿದ್ದಾರೆ.
ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬಾವಿ ತೋಡುವ ಕಾರ್ಯ ವೀಕ್ಷಿಸಿ, ಗೌರಿ ನಾಯ್ಕ ಅವರ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಅಲ್ಲದೇ, ಈ ವಯಸ್ಸಿನಲ್ಲಿ ಒಬ್ಬರೇ ಬಾವಿ ತೋಡಬೇಡಿ, ಸರ್ಕಾರದಿಂದಲೇ ಬಾವಿ ತೋಡಿಸಿ ಮಕ್ಕಳಿಗೆ ನೀರು ಒದಗಿಸುತ್ತೇನೆ ಎಂದಿದ್ದರು. ಆದರೆ, ಗೌರಿ ನಾಯ್ಕ ಇದಕ್ಕೊಪ್ಪದೇ ಬಾವಿ ತೋಡುವ ಕಾರ್ಯ ಮುಂದುವರಿಸುವುದಾಗಿ ತಿಳಿಸಿದ್ದರು.
ಸೋಮವಾರ ತಹಸೀಲ್ದಾರ್ ಶ್ರೀಧರ ಮುಂದಲಮನಿ, ತಾಪಂ ಕಾರ್ಯ ನಿರ್ವಹಣಾಽಕಾರಿ ಸತೀಶ ಹೆಗಡೆ ಇತರರು ಆಗಮಿಸಿ ``ಸದ್ಯ ಬಾವಿ ತೋಡುವ ಕಾರ್ಯವನ್ನು ಸ್ಥಗಿತಗೊಳಿಸಿ. ಮುಂದಿನ ಆದೇಶ ಆಗುವವರೆಗೂ ಈ ಕಾರ್ಯ ಮುಂದುವರಿಸಬೇಡಿ" ಎಂದು ಸೂಚನೆ ನೀಡಿದ್ದಾರಲ್ಲದೇ ಬಾವಿಗೆ ಮರದ ಹಲಗೆಯನ್ನು ಅಡ್ಡ ಇಟ್ಟು ಸಾಗಿದ್ದಾರೆ.
ಗೌರಿ ನಾಯ್ಕ ಕಳೆದ 18 ದಿನಗಳಿಂದ ಒಬ್ಬಂಟಿಯಾಗಿ ಬಾವಿ ತೋಡಿದ್ದು, ಇನ್ನು ಒಂದೆರಡು ದಿನಗಳ ಶ್ರಮದಿಂದ ಬಾಯಿಯಲ್ಲಿ ನೀರು ಬರುವ ಸಾಧ್ಯತೆ ಇದೆ. ಅಲ್ಲದೇ ಶಿರಸಿ ಜೀವ ಜಲಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಅವರು ಬಾವಿಗೆ ಕಟ್ಟೆ ನಿರ್ಮಿಸಿ, ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಈ ನಡುವೆ ಅಧಿಕಾರಿಗಳು ಬಾವಿಯನ್ನು ಮುಚ್ಚಿಟ್ಟಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಶಿರಸಿ ಉಪವಿಭಾಗಾಧಿಕಾರಿ ನಿರ್ದೇಶನದ ಮೇಲೆ ಬಾವಿ ತೋಡುವ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಮರದ ಹಲಗೆ ಮುಚ್ಚಿದ್ದೇವೆ.ಶ್ರೀಧರ ಮುಂದಲಮನಿ, ತಹಸೀಲ್ದಾರ್ ಶಿರಸಿ