ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದ ಹೊಸ ಸಹೋದ್ಯೋಗಿಗಳು ನೇಮಿಸಿಕೊಂಡಿರುವ ಆಪ್ತ ಕಾರ್ಯದರ್ಶಿ, ಆಪ್ತ ಸಹಾಯಕರು ಹಾಗೂ ಕಚೇರಿ ಸಹಾಯಕರತ್ತ ಈಗ ‘ಸಂಘ ಪರಿವಾರ’ದ ಕಣ್ಣು ನೆಟ್ಟಿದೆ.
ಸಂಪುಟಕ್ಕೆ ಸೇರ್ಪಡೆ ಹಾಗೂ ಖಾತೆಗಳ ಹಂಚಿಕೆ ಸಂದರ್ಭದಲ್ಲಿ ಸಂಘ ನೀಡಿದ ಸಲಹೆಗಳನ್ನು ಪಕ್ಷದ ವರಿಷ್ಠರು, ಸಿಎಂ ಪರಿಗಣಿಸಿದ್ದರು. ಇದೀಗ ಈ ಸಚಿವರು ಕ್ಷೇತ್ರ ಹಾಗೂ ಇಲಾಖೆಯ ದೈನಂದಿನ ಕೆಲಸಗಳನ್ನು ನಿಭಾಯಿಸುತ್ತಿರುವ ರೀತಿ-ರಿವಾಜು ಹಾಗೂ ಜವಾಬ್ದಾರಿ ಹೊತ್ತವರ ಬಗ್ಗೆಯೂ ತಿಳಿದುಕೊಳ್ಳಲು ಸಂಘ ಉತ್ಸುಕವಾಗಿದೆ. ಪ್ರತಿಯೊಬ್ಬ ನೂತನ ಸಚಿವರು ಆಪ್ತ ಕಾರ್ಯದರ್ಶಿ ಜತೆಗೆ ಆಪ್ತ ಹಾಗೂ ಕಚೇರಿ ಸಹಾಯಕರ ಹೆಸರಿನಲ್ಲಿ ನಾಲ್ಕೈದು ಜನರನ್ನು ಹೊಂದಿದ್ದು, ಇವರುಗಳ ಪೂರ್ವಾಪರ ಹಾಗೂ ಕಾರ್ಯಭಾರದ ಮಾಹಿತಿ ನೀಡಬೇಕೆಂಬ ಸಂದೇಶವನ್ನು ಸಂಘ ಪರಿವಾರ ರವಾನಿಸಿದೆ.
ಅನಗತ್ಯ ಹಸ್ತಕ್ಷೇಪ ತಡೆಯುವುದು, ಆಡಳಿತದ ಮೇಲೆ ಮುಖ್ಯಮಂತ್ರಿ ನಿಯಂತ್ರಣ ತಪ್ಪದಂತೆ ನೋಡಿಕೊಳ್ಳುವುದು ಹಾಗೂ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗದಂತೆ ನಿಗಾವಹಿಸಲು ಸಂಘ ಈ ಮಾಹಿತಿ ಬಯಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಮಧ್ಯೆ ಅನುಭವಿಗಳು ಅಥವಾ ಅನನುಭವಿಗಳಿರಲಿ, ಹಿಂದಿನವರಿಂದ ಸರ್ಕಾರ ಹಾಗೂ ಪಕ್ಷದ ಹೆಸರು ಕೆಟ್ಟು ಜನಾಕ್ರೋಶಕ್ಕೆ ತುತ್ತಾದ ಉದಾಹರಣೆಗಳಿವೆ. ಅದರಲ್ಲೂ ದಕ್ಷಿಣ ಭಾರತದ ಏಕೈಕ ರಾಜ್ಯದಲ್ಲಿ ಬಿಜೆಪಿಗೆ ಸಿಕ್ಕ ಅಧಿಕಾರ ಗಟ್ಟಿಯಾಗಿ ಉಳಿಸಿಕೊಳ್ಳಬೇಕು. ಮುಂದಿನ ಅವಧಿಗೂ ಜನರ ಒಲವು ಜತನವಾಗಿಡಲು ಸಂಘ ತುಸು ಹೆಚ್ಚಿನ ಕಾಳಜಿವಹಿಸಿದೆ ಎನ್ನುತ್ತವೆ ಮೂಲಗಳು.
ಮುಖ್ಯಮಂತ್ರಿಗೆ ವರಿಷ್ಠರ ನಿರ್ದೇಶನ
ಹೊಸ ಸಚಿವರ ಇಲಾಖೆಗಳಲ್ಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸದಲ್ಲಿ ಅನಗತ್ಯ ಹಸ್ತಕ್ಷೇಪವಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿಗೆ ಬಿಜೆಪಿ ವರಿಷ್ಠರು ನಿರ್ದೇಶನ ನೀಡಿದ್ದು, ನೂತನ ಸಚಿವರಿಗೆ ದಾರಿ ತಪ್ಪಿಸುವ ಪ್ರಯತ್ನಗಳಾದರೆ ಪಕ್ಷದ ಸಂಘಟನಾತ್ಮಕ ನೆಲೆ ಹಾಗೂ ಸರ್ಕಾರದ ವರ್ಚಸ್ಸಿಗೂ ಧಕ್ಕೆ ಬರುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜನತೆಯ ಆಶೋತ್ತರಗಳಿಗೆ ಸ್ಪಂದಿಸುವುದರ ಜತೆಗೆ ಪಕ್ಷದ ಸಂಘಟನೆಗೆ ಪೂರಕವಾದ ನೀತಿ-ನಿರ್ಧಾರ ಹಾಗೂ ಇಲಾಖೆಯ ಮಹತ್ವದ ಕೆಲಸಗಳ ಬಗ್ಗೆ ಗೌಪ್ಯತೆಯೂ ಮುಖ್ಯ. ಇನ್ನೂ ಚರ್ಚೆ ಹಂತದಲ್ಲಿರುವ ವಿಷಯಗಳು ಸೋರಿಕೆಯಾದರೆ ಇಲ್ಲದ ಸಮಸ್ಯೆ ಹುಟ್ಟಿಕೊಳ್ಳಲಿದ್ದು, ಈ ಬಗ್ಗೆಯೂ ಜಾಗ್ರತೆವಹಿಸಬೇಕು ಎನ್ನುವ ಸಲಹೆಯನ್ನೂ ವರಿಷ್ಠರ ಮುಖೇನ ಸಂಘ ನೀಡಿದೆ.
ಕಾಳಜಿಗೆ ಕಾರಣ
ರಮೇಶ್ ಜಾರಕಿಹೊಳಿ ಹಾಗೂ ಆನಂದ ಸಿಂಗ್ ಹೊರತುಪಡಿಸಿ ಉಳಿದ ಎಂಟು ಶಾಸಕರು ಇದೇ ಮೊದಲ ಬಾರಿಗೆ ಮಂತ್ರಿಯಾಗಿದ್ದಾರೆ. ಶಾಸಕರಾಗಿ ಹಲವು ಬಾರಿ ಆಯ್ಕೆಯಾಗಿ ಕ್ಷೇತ್ರ ಹಾಗೂ ಜನರ ಒಡನಾಟದಲ್ಲಿ ಪಳಗಿದ್ದರೂ ಇಲಾಖೆ ಹೊಣೆ ನಿರ್ವಹಿಸಲು ಅನುಭವ ಸಾಲದು ಎನ್ನುತ್ತವೆ ಪಕ್ಷದ ಮೂಲಗಳು.
| ಮೃತ್ಯುಂಜಯ ಕಪಗಲ್ ಬೆಂಗಳೂರು