ದಾವಣಗೆರೆ: ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ವಾಪಸಾಗುತ್ತಿದ್ದ ವೇಳೆ ಆಂಬುಲೆನ್ಸ್ ಕ್ಯಾಂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ನರ್ಸ್ ಒಬ್ಬರು ಮೃತಪಟ್ಟಿರುವ ಘಟನೆ ದಾವಣೆಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನಲ್ಲಿ ನಡೆದಿದೆ.
ಮೃತರನ್ನು ಜಮಖಂಡಿ ಮೂಲದ ವಿಶ್ವನಾಥ್ ಮನಗೂಳಿ(30) ಎಂದು ಗುರುತಿಸಲಾಗಿದ್ದು, ಶಿವಮೊಗ್ಗದಲ್ಲಿರುವ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಿ ವಾಪಸ್ ಆಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಜಮಖಂಡಿ ಮೂಲದ ವಿಶ್ವನಾಥ್ ಮನಗೂಳಿ ಕಳೆದ ಮೂರುವರೆ ವರ್ಷಗಳಿಂದ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರೋಗಿಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಕಾರಣ ಅವರನ್ನು ಶಿವಮೊಗ್ಗದಲ್ಲಿರುವ ಆಸ್ಪತ್ರೆಗೆ ದಾಖಲಿಸಿ ಆಂಬುಲೆನ್ಸ್ನಲ್ಲಿ ವಾಪಸ್ ಆಗುತ್ತಿದ್ದರು.
ರೋಗಿಯನ್ನು ಬಿಟ್ಟು ವಾಪಸ್ ಆಗುವ ವೇಳೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸವಳಂಗ-ಶಿಕಾರಿಪುರ ರಸ್ತೆಯ ಹೊಸಜೋಗ ಬಸ್ ನಿಲ್ದಾಣದ ಬಳಿ ಕ್ಯಾಂಟರ್ಗೆ ಆಂಬುಲೆನ್ಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನರ್ಸ್ ವಿಶ್ವನಾಥ್ರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಕ್ಯಾಂಟರ್ ಹಾಗೂ ಅಂಬುಲೆನ್ಸ್ ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.