ಮಾನ್ವಿ ಸರ್ಕಾರಿ ಉರ್ದು ಪ್ರೌಢಶಾಲೆ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿದರು. ಶಾಸಕ ಹಂಪಯ್ಯನಾಯಕ, ಬಿಇಒ ಚಂದ್ರಶೇಖರ ದೊಡ್ಡಮನಿ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಫೂರ್ ಸಾಬ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹುಸೇನ್ ಬಾಷಾ ಇದ್ದರು.  
ಜಿಲ್ಲೆ

ಪಾಲಕರ ಮನವೊಲಿಸಿ ಮಕ್ಕಳ ಕರೆತನ್ನಿ

ಪ್ರವೀಣ ಉದುಸಾ ದಲಬಂಜನ್

ಮಾನ್ವಿ: ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶಿಕ್ಷಕರ ಕೊರತೆಯಿಲ್ಲ. ಆದರೆ, ಮಕ್ಕಳ ಸಂಖ್ಯೆ ಕಡಿಮೆಯಿದ್ದು, ಸರಿಪಡಿಸುವ ಕಾರ್ಯವಾಗಲಿ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ-ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಶಾಲೆೆಯಲ್ಲಿ ಕೇವಲ 70 ವಿದ್ಯಾರ್ಥಿಗಳಿದ್ದು, ಮುಂದಿನ ದಿನಗಳಲ್ಲಿ ಸಂಖ್ಯೆ ಹೆಚ್ಚಾಗಬೇಕು. ಶಿಕ್ಷಕರು ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರಬೇಕು ಎಂದರು.

ಶಿಕ್ಷಣಕ್ಕೆ ಹೆಚ್ಚಿನ ಮಹತ್ವ

ಈ ಹಿಂದೆ ಇದೇ ಜಾಗದಲ್ಲಿ ತರಕಾರಿ ಮಾರುಕಟ್ಟೆ ನಿರ್ಮಿಸಲು ಯೋಚಿಸಲಾಗಿತ್ತು. ಆದರೆ, ಮಕ್ಕಳ ಶಿಕ್ಷಣಕ್ಕೆ ಅನುಕೂವಾಗಲಿ ಎಂದು ಉರ್ದು ಶಾಲೆಯನ್ನು ನಿರ್ಮಿಸಲಾಯಿತು. ಈ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮೂರು ದಿನಗಳ ಹಿಂದೆ ನಡೆದ ಸಚಿವ ಸಂಪುಟದಲ್ಲಿ ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಕೊಡುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಸಚಿವ ಬೋಸರಾಜು ತಿಳಿಸಿದರು.

ಸರ್ಕಾರದ ಜತೆಗೆ ಜನರ ಸಹಕಾರ ಅಗತ್ಯ

ಶಾಸಕ ಹಂಪಯ್ಯನಾಯಕ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸರ್ಕಾರದ ಜತೆಗೆ ಜನರ ಸಹಕಾರ ಅಗತ್ಯ. ಪಟ್ಟಣದ ಶಿವಪ್ರಿಯ ಸಹಕಾರಿ ಸಂಘ ಉರ್ದು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದರಿಂದ ಶೇ.100 ಫಲಿತಾಂಶ ಬರಲು ಸಾಧ್ಯವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ್, ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಇಂದಿರಾ, ಎಸ್ಡಿಎಂಸಿ ಅಧ್ಯಕ್ಷ ಮಹೆಬೂಬ್, ಮುಖ್ಯ ಶಿಕ್ಷಕ ಅಶೋಕುಮಾರ, ಪ್ರಮುಖರಾದ ಬಿ.ಕೆ.ಅಮರೇಶಪ್ಪ, ಬಾಲಸ್ವಾಮಿ ಕೊಡ್ಲಿ, ಶಾಂತಪ್ಪ ರಾಯಚೂರು, ಗುತ್ತಿಗೆದಾರ ಅಕ್ಬರ್ ಸಾಬ್, ಶಿವಪ್ರಿಯ ಸಹಕಾರಿ ಸಂಸ್ಥೆ ನಿರ್ದೇಶಕ ವೀರೇಶ ರೌಡೂರು, ಸಿಇಒ ನವೀನ್ ಕುಮಾರ ಬಾಗೋಡಿ ಇತರರು ಇದ್ದರು.