ಉಡುಪಿ ಜಿಲ್ಲಾ ಭಾರತೀಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘದ ಸಂಚಾಲಕ ಮೋಹನಚಂದ್ರ ಉಪ್ಪುಂದ ಅವರು ಸಂಘದ ಸದಸ್ಯರ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು. ಸಂಘದ ಅಧ್ಯಕ್ಷ ಸಂತೋಷ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ಶಶಿರಾಜ್, ಬೈಂದೂರು ಲಾವಣ್ಯ ಅಧ್ಯಕ್ಷ ನರಸಿಂಹ ಬಿ.ನಾಯಕ್ ಮತ್ತಿತರರಿದ್ದರು. 
ಜಿಲ್ಲೆ

ಪಾಲಕರಿಂದ ಮಕ್ಕಳಿಗೆ ಮಾರ್ಗದರ್ಶನ : ಪುಸ್ತಕ ವಿತರಣಾ ಸಮಾರಂಭದಲ್ಲಿ ಮೋಹನಚಂದ್ರ ಉಪ್ಪುಂದ ಸಲಹೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೈಂದೂರು

ಇಂದು ಮಕ್ಕಳು ಫೇಸ್‌ಬುಕ್, ವಾಟ್ಸಾಪ್‌ಗಳಂಥ ಸಾಮಾಜಿಕ ಮಾಧ್ಯಮಗಳ ಜಾಲದಲ್ಲಿ ಸಿಲುಕುತ್ತಿರುವುದು ದುರಂತ. ಆದ್ದರಿಂದ ಪಾಲಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಉತ್ತಮ ಮಾರ್ಗದರ್ಶನ ನೀಡಿ ಶೈಕ್ಷಣಿಕ ಸಾಧನೆಗೆ ಹುರುಪು ನೀಡಬೇಕಿದೆ ಎಂದು ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘದ ಸಂಚಾಲಕ, ಶ್ರಮ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮೋಹನಚಂದ್ರ ಉಪ್ಪುಂದ ಹೇಳಿದರು.

ಸಂಘದ ವತಿಯಿಂದ ಭಾನುವಾರ ಸದಸ್ಯರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಮಕ್ಕಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿದರು.

ಆಧುನಿಕ ಶಿಕ್ಷಣದ ನ್ಯೂನತೆಗಳು ಈಗಾಗಲೇ ದೊಡ್ಡ ಸವಾಲಾಗಿ ನಮ್ಮ ಸಮಾಜವನ್ನು ಕಾಡತೊಡಗಿದೆ. ತಂದೆ- ತಾಯಿಯರನ್ನೇ ಅನಾಥರಾಗಿಸುವ ಮಕ್ಕಳು, ಧಾರ್ಮಿಕ-ಸಾಂಸ್ಕೃತಿಕ ಮಹತ್ವಗಳ ಅಪಹಾಸ್ಯ, ಹಿಂಸೆಗೆ ಪ್ರೇರಣೆ ನೀಡುವ ಬೋಧನೆಯತ್ತ ಯುವ ಸಮುದಾಯದ ಒಲವು ಈಗಾಗಲೇ ನಮ್ಮ ಸಮಾಜಕ್ಕೆ ಸವಾಲಾಗಿ ಕಾಡಲು ಆರಂಭಿಸಿದ್ದು, ಇದು ಚಿಂತೆಯ ವಿಷಯವಾಗಿದೆ. ಈ ದಿಸೆಯಲ್ಲಿ ನಾವು ಜಾಗೃತರಾಗದಿದ್ದರೆ ಭವಿಷ್ಯದಲ್ಲಿ ದೇಶ ಭಾರಿ ಬೆಲೆ ತೆರಬೇಕಾಗಬಹುದು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡಬಹುದು ಎಂದರು.
ಸಂಘದ ಅಧ್ಯಕ್ಷ ಸಂತೋಷ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಶಿರಾಜ್, ಬೈಂದೂರು ಲಾವಣ್ಯ ಅಧ್ಯಕ್ಷ ನರಸಿಂಹ ಬಿ.ನಾಯಕ್ ಇದ್ದರು. ಖಜಾಂಚಿ ಸವಿತಾ ಸ್ವಾಗತಿಸಿದರು. ಯಮುನಾ ಕಾರ್ಯಕ್ರಮ ನಿರ್ವಹಿಸಿದರು.

ಮನೆಯೇ ಮೊದಲ ಪಾಠಶಾಲೆ. ಮಕ್ಕಳಿಗೆ ಮನೆಯಲ್ಲಿ ನೈತಿಕ ಮೌಲ್ಯಗಳ, ಧಾರ್ಮಿಕ ಸಂಸ್ಕಾರಗಳ ಅರಿವು ನೀಡಬೇಕು. ಔಪಚಾರಿಕ ಶಿಕ್ಷಣದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗೆ ವಿಪುಲ ಅವಕಾಶವಿರುವ ಸೂಕ್ತ ಶೈಕ್ಷಣಿಕ ಸಂಸ್ಥೆಗೆ ಮಕ್ಕಳನ್ನು ಸೇರಿಸಬೇಕು. ವಿದ್ಯಾರ್ಥಿಗಳಿಗೆ ಪಾಲಕರ ಕನಸನ್ನು ಸಾಕಾರಗೊಳಿಸುವ ಜವಾಬ್ದಾರಿಯಿದೆ. ಗುರಿ ಮುಟ್ಟುವ ತನಕ ಪ್ರಯತ್ನ ಮಾಡಿದ್ದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.- ಮೋಹನಚಂದ್ರ ಉಪ್ಪುಂದಅಧ್ಯಕ್ಷ, ಉಪ್ಪುಂದ ಗ್ರಾಮ ಪಂಚಾಯಿತಿ