ಜಿಲ್ಲೆ

ನೋಂಪಿಗಳಿಂದ ಕರ್ಮನಿರ್ಜರೆಯಾಗಿ ಮೋಕ್ಷ ಪ್ರಾಪ್ತಿ : ಶ್ರವಣಬೆಳಗೊಳ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬೆಳ್ತಂಗಡಿ ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥ ಕ್ಷೇತ್ರದಲ್ಲಿ ಶನಿವಾರ ಚಂದನ ಷಷ್ಠಿ ನೋಂಪಿ ವಿಧಾನದ ಉದ್ಯಾಪನಾ ಕಾರ್ಯಕ್ರಮ ವಿಧಿವಿಧಾನಗಳೊಂದಿಗೆ ನೆರವೇರಿತು.

ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಳ ಪ್ರವಚನ ನೀಡಿ, ಕಠಿಣ ವ್ರತ ನಿಯಮಗಳ ಪಾಲನೆಯೊಂದಿಗೆ ಚಂದನ ಷಷ್ಠಿಯಂಥ ಪವಿತ್ರ ನೋಂಪಿಗಳನ್ನು ಮಾಡಿದರೆ ನಮ್ಮ ಕರ್ಮಗಳ ನಿರ್ಜರೆಯಾಗಿ ರೋಗಗಳೂ ನಿವಾರಣೆಯಾಗಿ ಶಾಶ್ವತ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ. ಹೆಚ್ಚಾಗಿ ನೋಂಪಿಗಳನ್ನು ಚಾತುರ್ಮಾಸ್ಯದ ಅವಧಿಯಲ್ಲಿ ಭಾದ್ರಪದ ಮಾಸದಲ್ಲಿ ಮಾಡುತ್ತಾರೆ. ಭಾದ್ರಪದ ಮಾಸ ಬಹಳ ಹಿತಕರವಾಗಿದ್ದು, ನಾವು ಮಾಡಿದ ಭಾವನೆಗಳು ಭದ್ರವಾಗುತ್ತವೆ. ಪರಿಶುದ್ಧ ತನು, ಮನದೊಂದಿಗೆ ವ್ರತ ನಿಯಮಗಳ ಪಾಲನೆಯೊಂದಿಗೆ ದೇವರು ಮತ್ತು ಗುರುಗಳ ಸೇವೆ, ಆರಾಧನೆ ಮಾಡಬೇಕು. ಆಧುನಿಕತೆಯ ನೆಪದಲ್ಲಿ ಎಂದೂ ಅಪವಿತ್ರ, ಅವಿನಯ ಮಾಡಬಾರದು ಎಂದರು.

ಮೂರೂ ಬಸದಿಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಬಳಿಕ ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದ ಬಳಿಕ ಸಾಮೂಹಿಕ ಅಷ್ಟವಿಧಾರ್ಚನೆ ಪೂಜೆ ನಡೆಯಿತು. ಚಂದ್ರಪ್ರಭ ತೀಥರ್ಂಕರರ ಪೂಜೆ, ಭಗವಾನ್ ಶಾಂತಿನಾಥ ಸ್ವಾಮಿ ಪೂಜೆ, ನವದೇವತೆಗಳ ಪೂಜೆ, ಪಂಚಪರಮೇಷ್ಠಿಗಳ ಪೂಜೆ, ಕ್ಷೇತ್ರಪಾಲ ಪೂಜೆ, ಪದ್ಮಾವತಿ ದೇವಿ ಪೂಜೆ, ಬ್ರಹ್ಮಯಕ್ಷ ಪೂಜೆ, ಭಗವಾನ್ ಬಾಹುಬಲಿ ಸ್ವಾಮಿ ಪೂಜೆ ಮತ್ತು ಶ್ರುತ ಪೂಜೆ ನಡೆಸಲಾಯಿತು.

108 ಮಂತ್ರಪುಷ್ಟ ಅರ್ಚನೆ ಬಳಿಕ ಜಯಮಾಲಾ ಅರ್ಘ್ಯ ಅರ್ಪಿಸಲಾಯಿತು. ಬಸದಿಯ ಪ್ರಧಾನ ಅರ್ಚಕ ಕೆ.ಜಯರಾಜ ಇಂದ್ರರ ನೇತೃತ್ವದಲ್ಲಿ ನವೀನ ಕುಮಾರ ಇಂದ್ರ ಮತ್ತು ಕೆ.ಮಹಾವೀರ ಇಂದ್ರರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಧರ್ಮಸ್ಥಳದ ಸೌಮ್ಯಾ ಸುಭಾಶ್ ಮತ್ತು ಬಳಗದವರ ಜಿನ ಭಜನೆಗಳ ಸುಶ್ರಾವ್ಯ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಮೂಡುಬಿದಿರೆಯ ಸರ್ವೇಶ್ ಜೈನ್ ಮತ್ತು ಬಳಗದವರಿಂದ ಜಿನಭಕ್ತಿ ಗೀತೆಗಳ ಗಾಯನ ನಡೆಯಿತು.

ಬಸದಿಯ ಆನುವಂಶಿಕ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ್ ಬಳ್ಳಾಲ್, ಕೆ.ರಾಜವರ್ಮ ಬಳ್ಳಾಲ್, ಶ್ರೀನಾಥ್ ಬಳ್ಳಾಲ್, ವಿನಯಾ ಜೆ.ಬಳ್ಳಾಲ್, ವೈಶಾಲಿ ಬಳ್ಳಾಲ್, ಡಾ.ಪ್ರಿಯಾ ಬಳ್ಳಾಲ್, ವಿಜಯಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಎಂ.ಜಿನರಾಜ ಶೆಟ್ಟಿ ಮತ್ತು ಬಳ್ಳಾಲ್ ಕುಟುಂಬಸ್ಥರು ಉಪಸ್ಥಿತರಿದ್ದರು.

ಬಸದಿಯ ಆನುವಂಶೀಯ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ ಬಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಧರ್ಮಸ್ಥಳದ ಡಾ.ಕೆ.ಜಯಕೀರ್ತಿ ಜೈನ್ ಸ್ವಾಗತಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ವಂದಿಸಿದರು.

ಕೃತಿ ಬಿಡುಗಡೆ

18 ಮಂದಿ ಚಂದನ ಷಷ್ಠಿ ನೋಂಪಿ ವ್ರತಧಾರಿಗಳಲ್ಲಿ 8 ಮಂದಿ 6 ವರ್ಷಗಳನ್ನು ಪೂರೈಸಿದ್ದು ನೋಂಪಿ ಉದ್ಯಾಪನೆ ಮಾಡಿದರು. ನೋಂಪಿ ವ್ರತಧಾರಿಗಳಾದ ಕುಂಡದಬೆಟ್ಟು ವಿನಯಮ್ಮ, ಸಬ್ರಬೈಲು ಸುಮಲತಾ ಜೀವಂಧರ ಚೌಟ ಮತ್ತು ಸುಜಾತಾ ಧನಕೀರ್ತಿ ಆರಿಗ ಧರ್ಮಸ್ಥಳ ಪ್ರಕಟಿಸಿದ ಚಂದನ ಷಷ್ಠಿ ನೋಂಪಿ ವಿಧಾನ ಕೃತಿಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಕೃತಿಯನ್ನು ಎಲ್ಲರಿಗೂ ಶಾಸ್ತ್ರದಾನವಾಗಿ ವಿತರಿಸಲಾಯಿತು.