ಜಿಲ್ಲೆ

ಅಭ್ಯರ್ಥಿಗೆ ಗೊತ್ತಿಲ್ಲದೇ ನಾಮಪತ್ರ ವಾಪಸ್​: ಕರೆ ಮಾಡಿದ್ರೆ ಚು.ಅಧಿಕಾರಿಗಳಿಂದ ಬಂತು ಶಾಕಿಂಗ್ ಉತ್ತರ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಆನೇಕಲ್​: ಚುನಾವಣೆಯಲ್ಲಿ ಸ್ಪರ್ಧಿಸಿ ಗ್ರಾಮದ ಪ್ರಗತಿಗೆ ಶ್ರಮಿಸಬೇಕೆಂದು ಹಲವು ತಿಂಗಳಿನಿಂದ ತಯಾರಿ ನಡೆಸಿ ನಾಮಪತ್ರ ಹಾಕಿದ ಅಭ್ಯರ್ಥಿಯೊಬ್ಬರ ನಾಮಪತ್ರವನ್ನು ಅಪರಿಚಿತನೊಬ್ಬ ಪಡೆದಿರುವ ಅಚ್ಚರಿ ಘಟನೆ ನಡೆದಿದೆ.

ಆನೇಕಲ್ ತಾಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿಯ ನಾಗರ ವಾರ್ಡ್ ಒಂದಕ್ಕೆ ಸಾಮಾನ್ಯ ಪುರುಷ ಸ್ಥಾನಕ್ಕೆ ಸಿದ್ದೇಶ್ ಎಂಬುವವರು ನಾಮಪತ್ರ ಸಲ್ಲಿಸಿದರು. ಇದೇ ಖುಷಿಯಲ್ಲಿ ಮತದಾರರನ್ನು ಭೇಟಿ ಮಾಡಿ ಮತಕ್ಕಾಗಿ ಮನವಿ ಸಲ್ಲಿಸಲು ಅಣಿಯಾಗುತ್ತಿದ್ದಂತೆ ಸಿದ್ದೇಶ್​ಗೆ ಶಾಕ್ ಕಾದಿತ್ತು.

ನಾಮಪತ್ರ ಹಿಂಪಡೆಯುವ ಕೊನೆ ದಿನವಾದ 19ರ ಸಂಜೆ ತನ್ನ ನಾಮಪತ್ರ ವಾಪಸ್ಸು ಪಡೆದುಕೊಳ್ಳಲಾಗಿದೆ ಎಂಬ ಸುದ್ದಿ ಸಿದ್ದೇಶ್​ಗೆ ತಿಳಿದಿದೆ. ಕೂಡಲೇ ಪಂಚಾಯಿತಿ ಕಚೇರಿಗೆ ಹೋಗಿದ್ದರು ಆ ವೇಳೆಗೆ ಅಲ್ಲಿ ಚುನಾವಣಾ ಅಧಿಕಾರಿಗಳು ಯಾರು ಇರಲಿಲ್ಲ. ಭಾನುವಾರ ರಜೆ ಇದ್ದಿದ್ದರಿಂದ ದೂರವಾಣಿ ಮೂಲಕ ಅಧಿಕಾರಿಗಳನ್ನು ವಿಚಾರಿಸಿದ್ದಾರೆ. ಅಧಿಕಾರಿಗಳಿಂದಲೂ ನಿಮ್ಮ ನಾಮಪತ್ರವನ್ನು ಹಿಂಪಡೆಯಲಾಗಿದೆ ಎಂದು ಉತ್ತರ ಬಂದಿದೆ.

ಈ ಬಗ್ಗೆ ಮಾತನಾಡಿರುವ ಸಿದ್ದೇಶ್​, ನಾಮಪತ್ರ ಸಲ್ಲಿಕೆ ದಿನದಿಂದ ಹಿಂಪಡೆದುಕೊಳ್ಳಲು ಹಲವರಿಂದ ಒತ್ತಡ ಇತ್ತು. ಈ ಹಿನ್ನೆಲೆಯಲ್ಲಿ ನಾನು ಯಾರಿಗೂ ಸಿಗದಂತಿದ್ದೆ. ನಾಮಪತ್ರ ಹಿಂಪಡೆಯುವ ದಿನ ನಾಗೇಶ್ ಎಂಬ ಹೆಸರಿನ ಅಪರಿಚಿತ ವ್ಯಕ್ತಿ ನನ್ನ ಸಹಿ ಹಾಕಿ ನನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹಾಗಾಗಿ ನಾನು ಸ್ಪರ್ಧಿಸಿದ ವಾರ್ಡ್​ನಲ್ಲಿ ಚುನಾವಣೆ ಮುಂದೂಡಬೇಕೆಂದು ಚುನಾವಣೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡು ಲಿಖಿತವಾಗಿ ದೂರು ನೀಡಬೇಕೆಂದಿದ್ದೇನೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)