-ಹರಿಪ್ರಸಾದ್ ನಂದಳಿಕೆ ಕಾರ್ಕಳ
ಬಸ್ಸು ನಿಲ್ದಾಣ ಸೇರಿದಂತೆ ಕಾರ್ಕಳ ನಗರ ಪ್ರದೇಶದಲ್ಲಿ ಸಂಚರಿಸುವ ಬಸ್ಸು ಹಾಗೂ ಇತರ ವಾಹನಗಳ ಹಾರ್ನ್ ಕಿರಿಕಿರಿಯಿಂದ ಪರಿಸರದ ಜನರಿಗೆ ತೊಂದರೆಯಾಗುವುದಲ್ಲದೆ ಶಬ್ದ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ವಾಹನಗಳ ಅನಗತ್ಯ ಹಾರ್ನ್ ಬಳಕೆ ಕಡಿಮೆಗೊಳಿಸಿ ಶಬ್ದ ಮಾಲಿನ್ಯದಿಂದ ಮುಕ್ತಿ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೆಳೆಯುತ್ತಿರುವ ನಗರ ಪ್ರದೇಶಗಳಲ್ಲಿ ಒಂದಾದ ಕಾರ್ಕಳ ನಗರದಲ್ಲಿ ನಿತ್ಯ ಸಾವಿರಾರು ವಾಹನಗಳು ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತವೆ.ಬಂಡಿಮಠ ಬಸ್ಸು ನಿಲ್ದಾಣದಿಂದ ಕಾರ್ಕಳ ಬಸ್ಸು ನಿಲ್ದಾಣದವರೆಗೆ ನಗರದ ರಸ್ತೆಗಳಲ್ಲಿ ವಾಹನದ ಓಡಾಟ ಹೆಚ್ಚಿದೆ. ವಾಹನ ಚಾಲಕರು ಬೇಕಾಬಿಟ್ಟಿ ಕರ್ಕಶ ಹಾರ್ನ್‌ಬಾರಿಸುವುದು ಸಾರ್ವಜನಿಕರಿಗೆ ಮತ್ತು ಪರಿಸರದ ನಿವಾಸಿಗಳಿಗೆ ನಿತ್ಯ ಕಿರಿಕಿರಿಯಾಗಿ ಪರಿಣಮಿಸಿದೆ.
ನಗರ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ಬಹುತೇಕ ಎಲ್ಲ ವಾಹನಗಳು ಕರ್ಕಶ ಹಾರ್ನ್ ಹಾಕುವುದಕ್ಕೆ ಪ್ರಾರಂಭಿಸುತ್ತವೆ. ಇದರಿಂದ ನಿತ್ಯ ಗರಿಷ್ಠ ಪ್ರಮಾಣದಲ್ಲಿ ಕಾರ್ಕಳದಲ್ಲಿ ಶಬ್ದ ಮಾಲಿನ್ಯತೆಯಾಗುತ್ತಿದೆ ಎನ್ನುವುದು ನಾಗರಿಕರ ಆರೋಪವಾಗಿದೆ. ಅಲ್ಲದೆ ನಗರದ ರಸ್ತೆ ಬದಿಯಲ್ಲಿ ನಿಂತು ವ್ಯಾಪಾರ ನಡೆಸುವ ಮಂದಿಗೆ ಹಾಗೂ ಅಂಗಡಿ ಮುಂಗಟ್ಟು ವ್ಯಾಪಾರಸ್ಥರಿಗೆ ಬ್ಯಾಂಕ್, ಆಫೀಸ್ ಕಚೇರಿಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ನಿರಂತರ ಕರ್ಕಶ ಹರ್ನ್ ಶಬ್ದ ಕೇಳಿಸಿಕೊಳ್ಳುತ್ತಿರುವ ನಗರದ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ. ಸಾರ್ವಜನಿಕರು ನಿರಂತರ ಶಬ್ದ ಮಾಲಿನ್ಯದ ಸಮಸ್ಯೆಯನ್ನು ಅನುಭವಿಸುತ್ತಿದ್ದರೂ ಕ್ರಮ ಕೈಗೊಳ್ಳಬೇಕಾದ ಇಲಾಖೆ ಮಾತ್ರ ಮೌನಿಯಾಗಿದೆ ಎನ್ನುವುದು ಆರೋಪ.
ಉಡುಪಿ ಹಾಗೂ ದ.ಕ.ಜಿಲ್ಲೆಯನ್ನು ಹೊರತು ಪಡಿಸಿದರೆ ಅತಿ ಹೆಚ್ಚು ಪ್ರವಾಸಿಗರು ಕಾರ್ಕಳ ಭಾಗದ ರಸ್ತೆಯಲ್ಲಿ ಸಂಚರಿಸುತ್ತಾರೆ. ಪುಣ್ಯ ಕ್ಷೇತ್ರಗಳಾದ ಧರ್ಮಸ್ಥಳ, ಶೃಂಗೇರಿ, ಕಳಸ, ಹೊರನಾಡು, ಕಾರ್ಕಳದ ಚತುರ್ಮುಖ ಬಸದಿ, ಗೊಮ್ಮಟೇಶ್ವರ ಮೂರ್ತಿ, ದೇವಸ್ಥಾನಗಳು, ವರಂಗ ಬಸದಿ, ಪರಶುರಾಮ ಥೀಮ್ ಪಾರ್ಕ್ ಹೀಗೆ ಅನೇಕ ಪ್ರವಾಸಿ ತಾಣಗಳಿಗೆ ತೆರಳುವ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ವಾಹನಗಳು ಕಾರ್ಕಳದಲ್ಲಿ ಸಾಗುತ್ತಿದ್ದು, ಹಾರ್ನ್ ಬಳಕೆ ಹೆಚ್ಚುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಜಿಲ್ಲಾ ಕೇಂದ್ರ ಉಡುಪಿ ಕಡೆಯಿಂದ ಹಾಗೂ ಮಂಗಳೂರು ರಸ್ತೆಯ ಮೂರು ಮಾರ್ಗವಾಗಿ ಅತಿ ಹೆಚ್ಚು ವಾಹನಗಳು ನಗರದ ಬಸ್ ನಿಲ್ದಾಣ ತಲುಪುತ್ತವೆ. ಉಡುಪಿ, ಮಂಗಳೂರಿಗೆ ತೆರಳುವ ಸರ್ವಿಸ್ ಬಸ್, ಬಜಗೋಳಿ, ಬೆಳ್ಮಣ್, ನಿಟ್ಟೆ, ಪಡುಬಿದ್ರೆ, ಹೆಬ್ರಿ, ಅಜೆಕಾರು, ಹೀಗೆ ಗ್ರಾಮೀಣ ಭಾಗಗಳಿಗೆ ಸಂಚಾರಿಸುವ ಬಸ್ಸುಗಳು ಜತೆಗೆ ಪ್ರವಾಸಿ ವಾಹನಗಳು ಸೇರಿ ಪ್ರಮುಖ ಪೇಟೆ ಪ್ರದೇಶ ಸೇರುತ್ತಿದ್ದಂತೆ ವಾಹನಗಳ ಸಂಖ್ಯೆ ಹೆಚ್ಚಾಗಿ ಪದೇಪದೆ ಟ್ರಾಫಿಕ್ ಜಾಮ್ ಸಮಸ್ಯೆಯಾಗುತ್ತದೆ. ಈ ಸಂದರ್ಭ ವಾಹನ ಸವಾರರು ಹಾರ್ನ್ ಬಾರಿಸುವುದರಿಂದ ನಗರದಲ್ಲಿ ಶಬ್ದ ಮಾಲಿನ್ಯವಾಗುತ್ತಿದೆ.
ಕಾರ್ಕಳ ಪೇಟೆಯ ಪ್ರಮುಖ ರಸ್ತೆಗಳು ಅಗಲ ಕಿರಿದಾಗಿದ್ದು ನಗರವನ್ನು ಪ್ರವೇಶಿಸುತ್ತಿದ್ದಂತೆ ಬಸ್ಸುಗಳು ರಸ್ತೆಯಲ್ಲಿ ರಿಕ್ಷಾ, ಕಾರು, ಬೈಕ್ ಗಳು ಅಡ್ಡ ಬರುವ ಸಂದರ್ಭ ಕರ್ಕಶ ಹಾರ್ನ್ ಮೊಳಗಿಸಿಕೊಂಡು ಹೋಗುವುದು ಸಾಮಾನ್ಯ. ಹೀಗಾಗಿ ನಿತ್ಯ ಜನತೆಗೆ ಕಿರಿಕಿರಿಯಾಗಿದೆ. ರಸ್ತೆಗಳು ತೀರ ಕಿರಿದಾಗಿರುವ ಪರಿಣಾಮ ರಸ್ತೆಯಲ್ಲೇ ವಾಹನಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತವೆ. ನಗರಕ್ಕೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯಿಲ್ಲದಿರುವುದರಿಂದ ನಗರಕ್ಕೆ ಬರುವ ಮಂದಿ, ಸಾರ್ವಜನಿಕರು ರಸ್ತೆಯ ಬದಿಯಲ್ಲಿ, ಅಂಗಡಿ ಮುಂಗಟ್ಟುಗಳ ಮುಂದೆ ರಸ್ತೆಯಲ್ಲೇ ವಾಹನವನ್ನು ಪಾರ್ಕ್ ಮಾಡುತ್ತಾರೆ.
ಕಾರ್ಕಳ ಪೇಟೆ ಸಂಪರ್ಕಿಸುವ ನಗರದ ಮೂರು ಮಾರ್ಗ ಜಂಕ್ಷನ್‌ನಲ್ಲಿ ಓರ್ವ ಪೊಲೀಸ್ ಸಿಬ್ಬದ್ದಿಯನ್ನು ಟ್ರಾಫಿಕ್ ಸಮಸ್ಯೆ ನಿವಾರಣೆಗಾಗಿ ನಿಯೋಜಿಸಲಾಗಿದ್ದು, ಇಡೀ ದಿನ ಅವರು ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ. ವಾಹನ ಚಾಲಕರು ಪೊಲೀಸ್ ಸಿಬ್ಬಂದಿ ಎದುರಲ್ಲೇ ಕರ್ಕಶ ಹಾರ್ನ್ ಬಳಕೆ ಮಾಡುತ್ತಾರೆ. ಈ ರೀತಿ ಹಾರ್ನ್ ಬೇಕಾಬಿಟ್ಟಿ ಹಾಕಿಕೊಂಡು ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ವಾಹನಗಳ ಮೇಲೆ ಕ್ರಮ ಕೈಗೊಳ್ಳುವಂತೆ ನಗರದ ಜನ ಒತ್ತಾಯಿಸಿದ್ದಾರೆ.
ಕಾರ್ಕಳದಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಿಸಲು ಟ್ರಾಫಿಕ್ ಪೊಲೀಸ್ ಠಾಣೆಯಿಲ್ಲ. ಹೀಗಾಗಿ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಅಪರಾಧ ಪ್ರಕರಣ ಜತೆಯಲ್ಲಿ ನಗರದ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಬೇಕಾಗಿದೆ. ಕರ್ಕಶ ಹಾರ್ನ್ ಬಳಕೆಯನ್ನು ಇಲಾಖೆ ನಿಷೇಧಿಸಿದರೂ ನಗರದಲ್ಲಿ ಮಾತ್ರ ಹೆಚ್ಚಾಗಿ ಬಳಕೆಯಾಗುತ್ತಿದೆ. ಇಲಾಖೆಗಳು ಶಬ್ದ ಮಾಲಿನ್ಯದ ಬಗ್ಗೆ ಅಭಿಯಾನ, ಜಾಗೃತಿಯನ್ನು ಮೂಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕರ್ಕಶ ಹಾರ್ನ್‌ಗೆ ಕಡಿವಾಣ ಹಾಕುವುದು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ನಗರದಲ್ಲಿನ ಕರ್ಕಶ ಹಾರ್ನ್ ಬಳಕೆಯಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯ ಸಮಸ್ಯೆಯಿಂದ ಮುಕ್ತಿ ದೊರಕುವಂತೆ ಸಾರಿಗೆ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಗರವನ್ನು ವಾಹನಗಳು ಪ್ರವೇಶಿಸುತ್ತಿದ್ದಂತೆ ಕರ್ಕಶ ಹಾರ್ನ್ ಹಾಕುತ್ತಾರೆ. ಇದರಿಂದ ಪರಿಸರದಲ್ಲಿ ನಮಗೆ ತುಂಬಾನೇ ಕಿರಿಕಿರಿ ನಿತ್ಯ ಆಗುತ್ತಿದೆ. ಈ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.-ಕೃಷ್ಣ ಸಾಲ್ಯಾನ್, ನಾಗರಿಕ
ಮೂರು ಮಾರ್ಗ ಜಂಕ್ಷನ್‌ನಲ್ಲಿ ಈಗಾಗಲೇ ನಮ್ಮ ಸಿಬ್ಬಂದಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಕ್ರಮ ವಹಿಸುತ್ತಿದ್ದಾರೆ. ಆದರೆ ನಗರದಲ್ಲಿ ವಾಹನದ ಕರ್ಕಶ ಹಾರ್ನ್ ಬಳಕೆಯಿಂದ ಶಬ್ದ ಮಾಲಿನ್ಯದ ಬಗ್ಗೆ ದೂರುಗಳಿವೆ. ಈ ಬಗ್ಗೆ ಸಂಬಂಧಿಸಿದ ಆರ್.ಟಿ.ಒ ಇಲಾಖೆ ಅಧಿಕಾರಿಗಳೇ ಕ್ರಮ ಕೈಗೊಳ್ಳಬೇಕಾಗಿದೆ. -ಪ್ರಸನ್ನ ಕುಮಾರ್, ಸಬ್‌ಇನ್‌ಸ್ಪೆಕ್ಟರ್ ನಗರ ಪೊಲೀಸ್ ಠಾಣೆ ಕಾರ್ಕಳ