ತುಂಬೆ ವೆಂಟೆಡ್ ಡ್ಯಾಂನಲ್ಲಿ ಮನಾಪ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಬಾಗಿನ ಸಮರ್ಪಿಸಿದರು. ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಮನಾಪ ಆಯುಕ್ತ ಆನಂದ ಸಿ.ಎಲ್., ಉಪ ಮಹಾ ಆಯುಕ್ತೆ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮತ್ತಿತರರಿದ್ದರು. 
ಜಿಲ್ಲೆ

ನೇತ್ರಾವತಿಯಲ್ಲಿ ನೀರು ಸಮೃದ್ಧ

Avinash R

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ನೇತ್ರಾವತಿ ನದಿಯಲ್ಲಿ ನೀರು ಸಮೃದ್ಧವಾಗಿದ್ದು, 160 ಎಂಎಲ್‌ಡಿ ನೀರು ಮಂಗಳೂರಿಗೆ ಸರಬರಾಜಾಗುತ್ತಿದೆ. ಉಳ್ಳಾಲ, ಮೂಲ್ಕಿಯ ಜತೆಗೆ ಸುತ್ತಲಿನ ಗ್ರಾಮೀಣ ಪ್ರದೇಶದ ಜನತೆಗೆ ಕುಡಿಯುವ ನೀರು ಒದಗಿಸುವ ನೇತ್ರಾವತಿ ಫೆಬ್ರವರಿಯಲ್ಲಿಯೂ ಪೂರ್ಣವಾಗಿ ತುಂಬಿದ್ದು, ಡ್ಯಾಂನ ಒಂದು ಗೇಟ್ ಮೂಲಕ ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿದರು.

ತುಂಬೆ ವೆಂಟೆಡ್ ಡ್ಯಾಂನಲ್ಲಿ ಸೋಮವಾರ ಗಂಗಾಪೂಜೆ ನೆರವೇರಿಸಿ, ಬಳಿಕ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿ ಮಾತನಾಡಿದರು.

ಕಳೆದ ಸಾಮಾನ್ಯ ಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಸದಸ್ಯರು ಪ್ರತಿಭಟನೆ ಮಾಡಿದ್ದು, ತಕ್ಷಣ 4 ತಂಡ ರಚಿಸಿ ಅನಧಿಕೃತ ನಳ್ಳಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಡ್ಯಾಂನಲ್ಲಿ 0.6 ಟಿಎಂಸಿ ನೀರು ಸಂಗ್ರಹವಿದ್ದು, ಅಡ್ಯಾರ್‌ನಿಂದ ಪಣಂಬೂರಿನವರೆಗೆ ಹೊಸದಾಗಿ ಪೈಪ್‌ಲೈನ್ ಮಾಡಲು 68 ಕೋಟಿ ರೂ. ಅಗತ್ಯವಿದೆ. ಡಿಪಿಆರ್ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜನರಿಗೆ ನೀರು ಕೊಡುವ ಜವಾಬ್ದಾರಿಯನ್ನು ಮನಪಾ ನಿಭಾಯಿಸಲಿದೆ ಎಂದರು.

ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ನೇತ್ರಾವತಿಯ ಆಶೀರ್ವಾದದಿಂದ ಮಂಗಳೂರಿಗೆ ನೀರಿನ ಕೊರತೆ ಆಗಿಲ್ಲ. ನದಿಯನ್ನು ಸಂರಕ್ಷಿಸಬೇಕು. ಅನಗತ್ಯವಾಗಿ ನೀರು ವ್ಯರ್ಥ ಮಾಡುವುದನ್ನು ತಪ್ಪಿಸಬೇಕು. ಅಕ್ರಮ ಸಂಪರ್ಕ ಪತ್ತೆ ಹಚ್ಚಿ ಸಂಪರ್ಕ ಕಡಿತಗೊಳಿಸಿರುವ ಅಧಿಕಾರಿಗಳ ಕಾರ್ಯ ಶ್ಲಾಘನೀಯ ಎಂದರು.

ಮನಾಪ ಆಯುಕ್ತ ಆನಂದ ಸಿ.ಎಲ್. ಮಾತನಾಡಿದರು. ಉಪ ಮಹಾ ಆಯುಕ್ತೆ ಸುನೀತಾ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮಾಜಿ ಅಧ್ಯಕ್ಷರಾದ ಶಶಿಧರ ಹೆಗ್ಡೆ, ದಿವಾಕರ್ ಪಾಂಡೇಶ್ವರ, ಭಾಸ್ಕರ ಮೊಯ್ಲಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ವರುಣ್ ಚೌಟ, ಭರತ್ ಕುಮಾರ್ ಎಸ್., ಲೋಹಿತ್ ಅಮೀನ್, ಗಣೇಶ್, ಜಯಾನಂದ ಅಂಚನ್, ತುಂಬೆ ಗ್ರಾಪಂ ಅಧ್ಯಕ್ಷೆ ಜಯಂತಿ ಕೇಶವ ಉಪಸ್ಥಿತರಿದ್ದರು. ಪಾಲಿಕೆ ಸದಸ್ಯರು, ಅಧಿಕಾರಿ ವರ್ಗದವರು ಇದ್ದರು. ರಾಜೇಶ್ ಸುವರ್ಣ ನಿರೂಪಿಸಿದರು.

ಕುಡ್ಸೆಂಪ್ ಮೂಲಕ ಗ್ರಾಪಂಗಳಿಗೆ ನೀರು ಪೂರೈಸಲು 10 ಎಂಜಿಡಿಯ ಹೊಸ ಪ್ಲಾಂಟ್ ನಿರ್ಮಿಸಿದ್ದು, ಶೀಘ್ರದಲ್ಲಿ ಲೋಕಾರ್ಪಣೆ ಮಾಡಿ ಮನಪಾ ಮೂಲಕ ಗ್ರಾಪಂಗಳಿಗೆ ಉಚಿತವಾಗಿ ನೀರು ನೀಡಲು ಪಂಚಾಯಿತಿಗಳು ಸಹಕಾರ ನೀಡಬೇಕು. ಮನಾಪ ವ್ಯಾಪ್ತಿಯಲ್ಲಿ ದಿನದ 24 ಗಂಟೆ ಕಾಲ ನೀರು ಕೊಡುವ ಉದ್ದೇಶದಿಂದ ಜಲಸಿರಿ ಯೋಜನೆಯಡಿ 587 ಕೋಟಿ ರೂ. ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. 204 ಕೋಟಿ ರೂ. ನಿರ್ವಹಣೆಗಾಗಿ ಮೀಸಲಿಡಲಾಗಿದೆ.-ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್