More

    ಕೂಕ್ರಬೆಟ್ಟು ಶಾಲೆಗೆ ಮರುಜೀವ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

    ಕೇವಲ 16 ಮಕ್ಕಳಿದ್ದು ಮುಚ್ಚುವ ಹಂತದಲ್ಲಿದ್ದ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೀಗ ಬರೋಬ್ಬರಿ 180 ಮಕ್ಕಳು ಓದುತ್ತಿದ್ದಾರೆ. ವಿದ್ಯಾರ್ಥಿಗಳ ಕೊರತೆಯಿಂದಾಗಿ ಇತಿಹಾಸದ ಪುಟ ಸೇರಬೇಕಿದ್ದ ಶಾಲೆಯೊಂದು ಹೊಸ ಇತಿಹಾಸ ನಿರ್ಮಿಸಿದೆ.

    65 ವರ್ಷ ಇತಿಹಾಸ ಹೊಂದಿರುವ ಕೂಕ್ರಬೆಟ್ಟು ಶಾಲೆ 4 ವರ್ಷಗಳ ಹಿಂದೆ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿತ್ತು. 1ರಿಂದ 7ನೇ ತರಗತಿ ಹೊಂದಿರುವ ಶಾಲೆಯಲ್ಲಿ ಕೆಲವು ತರಗತಿಗಳು ಮಕ್ಕಳಿಲ್ಲದೆ ಖಾಲಿಯಿದ್ದವು. ಈ ಹಂತದಲ್ಲಿ ಹಳೇ ವಿದ್ಯಾರ್ಥಿಗಳು ಶಾಲೆಯಲ್ಲಿ ಸಭೆ ಸೇರಿ, ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಅವರನ್ನು ಸಂಪರ್ಕಿಸಿ ಶಾಲೆಗೆ ಆಹ್ವಾನಿಸಿದರು.

    ಬಂಟ್ವಾಳ ತಾಲೂಕಿನ ದಡ್ಡಲಕಾಡಿನಲ್ಲಿ ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಮರುಜೀವ ನೀಡಿದ್ದ ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಪ್ರಕಾಶ್ ಅಂಚನ್ 2019 ಫೆ.2ರಂದು ತಮ್ಮ ತಂಡದೊಂದಿಗೆ ಮರೋಡಿಗೆ ಧಾವಿಸಿ ಗ್ರಾಮದ ಮನೆಮನೆಗೆ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿದರು. ಸಭೆ ಕರೆದು ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ರಚಿಸಿದರು.

    ಇದೀಗ ಶಾಲೆಯಲ್ಲಿ ಮರೋಡಿ ಮಾತ್ರವಲ್ಲದೆ ಸುತ್ತಮುತ್ತಲಿನ ಪೆರಾಡಿ, ಕಾಶಿಪಟ್ಣ, ಕೊಕ್ರಾಡಿ, ಸಾವ್ಯ, ಕುತ್ಲೂರು, ನಾರಾವಿ, ಶಿರ್ತಾಡಿ ಗ್ರಾಮಗಳ ಮಕ್ಕಳು ಕಲಿಯುತ್ತಿದ್ದಾರೆ. ಶಾಲೆಯನ್ನು ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ದತ್ತು ಪಡೆದಿದೆ. ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲಾಗಿದೆ. ಕನ್ನಡದೊಂದಿಗೆ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅನುಮತಿ ಪಡೆಯಲಾಗಿದೆ. ಯೋಗ, ಕರಾಟೆ, ನೃತ್ಯ, ಯಕ್ಷಗಾನ ಮುಂತಾದ ಪಠ್ಯೇತರ ಚಟುವಟಿಕೆ ಪ್ರೋತ್ಸಾಹಿಸಲಾಗುತ್ತಿದೆ. ಶ್ರೀ ದುರ್ಗಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶಾಲಾ ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಮುಖ್ಯಶಿಕ್ಷಕಿ ಸೇರಿದಂತೆ ನಾಲ್ವರು ಕಾಯಂ ಶಿಕ್ಷಕಿಯರು, ಮೂರು ಅತಿಥಿ ಶಿಕ್ಷಕಿಯರು ಮತ್ತು ಮೂವರು ಗೌರವ ಶಿಕ್ಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಸ್ಮಾರ್ಟ್ ಕ್ಲಾಸ್ ಸೌಲಭ್ಯ

    ಹಳ್ಳಿಯ ಮಕ್ಕಳಿಗೂ ಡಿಜಿಟಲ್ ಶಿಕ್ಷಣ ಸಿಗುವ ಉದ್ದೇಶದಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ ಯೋಜನೆಯಡಿ ಐಇಇಇ ಅಡ್ವಾನ್ಸಿಂಗ್ ಟೆಕ್ನಾಲಜಿ ಫಾರ್ ಹ್ಯುಮಾನಿಟಿ ಸಂಸ್ಥೆಯಿಂದ ಕೂಕ್ರಬೆಟ್ಟು ಶಾಲೆಗೆ ಸುಮಾರು 2.40 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಕಲ್ಪಿಸಲಾಗಿದೆ. ಎಂಆರ್‌ಪಿಎಲ್‌ನ ಸಿಎಸ್‌ಆರ್ ನಿಧಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಶೌಚಗೃಹ ನಿರ್ಮಿಸಲಾಗಿದೆ. ನೂತನ ಕಟ್ಟಡಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದಿಂದ 2 ಲಕ್ಷ ರೂ. ಒದಗಿಸಲಾಗಿದೆ.

    17ಕ್ಕೆ ಕಟ್ಟಡ ಲೋಕಾರ್ಪಣೆ

    ಶಾಸಕ ಹರೀಶ್ ಪೂಂಜ ಮತ್ತು ದ.ಕ. ಸಂಸದರ ಅನುದಾನದಿಂದ 1.10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕೂಕ್ರಬೆಟ್ಟು ಶಾಲೆ ಕಟ್ಟಡದ ಲೋಕಾರ್ಪಣಾ ಸಮಾರಂಭ ಮತ್ತು ಶಾಲಾ ಮಕ್ಕಳ ಸಾಂಸ್ಕೃತಿಕ ವೈಭವ ಫೆ.17ರಂದು ನಡೆಯಲಿದೆ. ಸಂಜೆ 5ಕ್ಕೆ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಟ್ಟಡ ಉದ್ಘಾಟಿಸಲಿದ್ದಾರೆ. ಸಚಿವ ಮಧು ಬಂಗಾರಪ್ಪ, ರಾಜ್ಯಸಭಾ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಎಂಎಲ್‌ಸಿಗಳಾದ ಬಿ.ಎಂ.ಫಾರೂಕ್, ಕೆ.ಹರೀಶ್ ಕುಮಾರ್, ಎಸ್.ಎಲ್.ಭೋಜೇಗೌಡ, ಪ್ರತಾಪಸಿಂಹ ನಾಯಕ್, ಮಂಜುನಾಥ ಭಂಡಾರಿ, ಮರೋಡಿ ಗ್ರಾಪಂ ಅಧ್ಯಕ್ಷ ರತ್ನಾಕರ ಬುಣ್ಣಾನ್, ಸರ್ಕಾರಿ ಶಾಲೆ ಉಳಿಸಿ-ಬೆಳೆಸಿ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್, ಉದ್ಯಮಿ ಶಶಿಧರ ಶೆಟ್ಟಿ ಬರೋಡ ಭಾಗವಹಿಸಲಿದ್ದಾರೆ. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸುವರು.

    ಮುಚ್ಚುವ ಹಂತದಲ್ಲಿದ್ದ ಕೂಕ್ರಬೆಟ್ಟು ಶಾಲೆಗೆ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ಎಲ್ಲರ ಸಹಕಾರದಿಂದ ಕಾಯಕಲ್ಪ ನೀಡಲಾಗಿದೆ. ನಾಲ್ಕು ವಷರ್ದಲ್ಲಿ ಮಕ್ಕಳ ಸಂಖ್ಯೆ 11 ಪಟ್ಟು ಹೆಚ್ಚಾಗಿದೆ. ಸಂಘಸಂಸ್ಥೆ, ದಾನಿಗಳ ಸಹಕಾರದಿಂದ ಶಾಲೆಗೆ ಬೇಕಾದ ಮೂಲಸೌಕರ್ಯ ಪಡೆಯಲಾಗುತ್ತಿದೆ. ಶಾಲೆ ಮೇಲ್ದರ್ಜೆಗೆ ಏರಿಸಿ ರಾಜ್ಯಕ್ಕೆ ಮಾದರಿ ಮಾಡುವ ಸಂಕಲ್ಪ ನಮ್ಮದು.
    -ಜಯಂತ ಕೋಟ್ಯಾನ್, ಅಧ್ಯಕ್ಷ, ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ಕೂಕ್ರಬೆಟ್ಟು ಶಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts