More

    ಅಶ್ಲೀಲ ವೀಡಿಯೋ ಪ್ರಕರಣ; ಜೆಡಿಎಸ್‌ನಲ್ಲಿ ಅಲ್ಲೋಲ ಕಲ್ಲೋಲ

    ಬೆಂಗಳೂರು: ಹಾಸನದ ಪೆನ್‌ಡ್ರೈವ್ ಪ್ರಕರಣ ಜೆಡಿಎಸ್‌ನ್ನು ಅಲ್ಲೋಲ ಕಲ್ಲೋಲಗೊಳಿಸಿದೆ. ಕೆಲವೇ ಕೆಲವು ದಿನಗಳ ಹಿಂದೆಯಷ್ಟೆ ಮಾಜಿ ಸಿಎಂ ಕುಮಾರಸ್ವಾಮಿ ಗ್ಯಾರಂಟಿಯಿಂದ ತಾಯಂದಿರು ದಾರಿತಪ್ಪಿದ್ದಾರೆ ಎಂಬ ಹೇಳಿಕೆ ನೀಡಿ ಕೈ ಕೈ ಹಿಸುಕಿಕೊಂಡ ಬೆನ್ನಲ್ಲೇ ಜೆಡಿಎಸ್‌ಗೆ ಮತ್ತೊಂದು ಬರ ಸಿಡಿಲು ಬಡಿದಿದೆ.

    ಒಂದೆಡೆ ಸರ್ಕಾರ ಪ್ರಕರಣವನ್ನು ಎಸ್‌ಐಟಿಗೆ ನೀಡಿದ್ದು, ತನಿಖೆ ನಡೆಯುತ್ತಿದೆ. ಇನ್ನೊಂದೆಡೆ ಪ್ರಕರಣ ಇಡೀ ಪಕ್ಷವನ್ನೇ ಮುಜುಗರಕ್ಕೀಡು ಮಾಡಿದೆ. ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ಬಗ್ಗೆ ಕಾಂಗ್ರೆಸ್ ನಾಯಕರು ಜೆಡಿಎಸ್ ವಿರುದ್ಧ ಮುಗಿಬಿದ್ದಿದ್ದಾರೆ. ಮತ್ತೊಂದೆಡೆ ಮಹಿಳೆಯರು ಪ್ರತಿಭಟನೆ ನಡೆಸಿ ಪಕ್ಷದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.

    ಕಾಂಗ್ರೆಸ್ ಒತ್ತಟ್ಟಿಗಿರಲಿ, ಸ್ವ ಪಕ್ಷದವರೇ ಪ್ರಜ್ವಲ್ ಉಚ್ಛಾಟನೆಗೆೆ ಆಗ್ರಹಿಸಿ ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಗುರುಮಿಠ್ಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ನೇರವಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರಿಗೆ ಪತ್ರ ಬರೆದರೆ, ಇನ್ನೊಬ್ಬ ಸಮೃದ್ಧಿ ಮಂಜುನಾಥ್ ಸಾಮಾಜಿಕ ಜಾಲ ತಾಣದಲ್ಲಿ ಜೆಡಿಎಸ್ ವರಿಷ್ಠರನ್ನು ತರಾಟೆ ತೆಗೆದುಕೊಂಡಿದ್ದಾರೆ. ನಿಮಗೆ 19 ಶಾಸಕರ ಭವಿಷ್ಯ ಬೇಕೋ ಅಥವಾ ಕುಟುಂಭದ ರೇವಣ್ಣ, ಪ್ರಜಲ್ವ ರೇವಣ್ಣ ಭವಿಷ್ಯ ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ.

    ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ಪ್ರತಿಕ್ರಿಯಿಸಿ,‘ಉಪ್ಪು ತಿಂದವರು ನೀರು ಕುಡಿಯಲೇಬೇಕು ಅಶಿಸ್ತು, ಮಹಿಳೆಯರ ಬಗ್ಗೆ ಅಗೌರವ ಸಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು.

    ಸಾರ್ವಜನಿಕವಾಗಿ ತೀವ್ರ ಮುಜುಗರ ಆಗುತ್ತಿರುವುದರಿಂದ ಡ್ಯಾಮೇಜ್ ಕಂಟ್ರೋಲ್ ಹಿನ್ನೆಲೆಯಲ್ಲಿ ಪ್ರಜ್ವಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ದೇವೇಗೌಡರೇ ಈ ಕ್ರಮ ಕೈಗೊಂಡಿದ್ದಾರೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

    ಅಶ್ಲೀಲ ವೀಡಿಯೊ ಪ್ರಕರಣದ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಗುರುಮಿಟ್ಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರು ದೇವೇಗೌಡರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
    ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿರುವ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಆಂತರಿಕ ಸಮಿತಿ ರಚನೆ ಮಾಡಬೇಕು. ಆ ಸಮಿತಿಯು ಪೆನ್‌ಡ್ರೈವ್ ಪ್ರಕರಣದ ಸತ್ಯಾಸತ್ಯತೆಯನ್ನು ನಾಡಿನ ತಾಯಂದಿರಿಗೆ ತಿಳಿಸುವಂತಾಗಲಿ, ಅಲ್ಲಿಯವರೆಗೆ ಪಕ್ಷಕ್ಕಾಗುವ ಮುಜುಗರ ತಪ್ಪಿಸಲು ರಾಜ್ಯದ 2ನೇ ಹಂತದ ಲೋಕಸಭಾ ಚುನಾವಣೆ ವೇಳೆ ವ್ಯತಿರಿಕ್ತ ಪ್ರಭಾವ ಬೀರದಿರಲು ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಮನವಿ ಮಾಡಿದ್ದಾರೆ.

    19 ಶಾಸಕರ ಭವಿಷ್ಯ ಬೇಕೋ? ತಮ್ಮ ಕುಟುಂಬದ ರೇವಣ್ಣ, ಪ್ರಜ್ವಲ್ ಮುಖ್ಯವೋ? ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಸಾಮಾಜಿಕ ಜಾಲ ತಾಣದಲ್ಲೇ ಪ್ರಶ್ನಿಸಿದ್ದಾರೆ.
    24 ಗಂಟೆಗಳಲ್ಲಿ ಎಚ್.ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಒತ್ತಾಯಿಸಿದ್ದಾರೆ.
    ನಮಗೆಲ್ಲ ಪಕ್ಷದ ಹೆಸರು ಹೇಳಲು ಹೇಸಿಗೆ ಎನಿಸುವಂತಹ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಕೂಡಲೇ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
    ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತ ಕೆಲಸ ಮಾಡಿದವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಪಕ್ಷದ ಘನತೆಯನ್ನು ಉಳಿಸಬೇಕಿದೆ. ಇತ್ತಿಚಿನ ದಿನಗಳಲ್ಲಿ ಹಾಸನದ ಲೀಲೆಗಳು ಮಾಧ್ಯಮಗಳಲ್ಲಿ ಪ್ರಜ್ವಲಿಸುತ್ತಿರುವುದು ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ರಾಜ್ಯದಲ್ಲೆಡೆ ಮುಜುಗರಕ್ಕೆ ಒಳಗಾಗಿರುವುದಲ್ಲದೆ ಪಕ್ಷದ ಹೆಸರು ಹೇಳಲು ಸಹ ಹೇಸಿಗೆ ಅನಿಸುವಂತ ಸ್ಥಿತಿಗೆ ತಲುಪಿದೆ. ಆದ್ದರಿಂದ ಆರೋಪ ಹೊತ್ತಿರುವ ರೇವಣ್ಣ ಮತ್ತು ಪ್ರಜ್ವಲ್ರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಪಕ್ಷದ ಸಿದ್ಧಂತಗಳನ್ನು ಉಳಿಸಿ ಕಾರ್ಯಕರ್ತರನ್ನು, ನಮ್ಮನ್ನು ಮುಜುಗರದಿಂದ ಪಾರು ಮಾಡುವಂತೆ ಸಮೃದ್ಧಿ ಮಂಜುನಾಥ್ ಮನವಿ ಮಾಡಿದ್ದಾರೆ.

    ನಮ್ಮ ಕುಟುಂಬ, ರೇವಣ್ಣ ಕುಟುಂಬ ಬೇರೆ ಬೇರೆ…
    ಅಶ್ಲೀಲ ವಿಡಿಯೋ ಪ್ರಕರಣದ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಛಾಟಿಸಲಾಗಿದೆ. ದೇವೇಗೌಡ ಅವರೇ ಪ್ರಜ್ವಲ್ ರೇವಣ್ಣ ಅವರನ್ನು ಉಚ್ಛಾಟಿಸಿದ್ದಾರೆ. ನಮ್ಮ ಕುಟುಂಬ ಮತ್ತು ರೇವಣ್ಣ ಕುಟುಂಬದವರು ಬೇರೆ ಬೇರೆ ಇದ್ದೇವೆ. ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವೇಗೌಡ ಮತ್ತು ನನ್ನ ಕುಟುಂಬವನ್ನು ಎಳೆದು ತರಬೇಡಿ.
    -ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts