ಗುರುಪುರ: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆ ಕ್ಷೇತ್ರ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ವೃಷಭ ಮಾಸದ ಹುಣ್ಣಿಮೆ ದಿನವಾದ ಮಂಗಳವಾರ ದೇವರ ನಿತ್ಯಬಲಿ ಉತ್ಸವ ಸಮಾಪ್ತಿಯಾಯಿತು.
ಪೂರ್ವಶಿಷ್ಟ ಸಂಪ್ರದಾಯದಂತೆ ಕುಡುಪು ದೇವಳದಲ್ಲಿ ವೃಷಭ ಮಾಸದ ಹುಣ್ಣಿಮೆಯಂದು ದೇವರಿಗೆ ಎರಡು ಹೊತ್ತು ನಿತ್ಯ ಬಲಿ ಉತ್ಸವ ದೇವಸ್ಥಾನದೊಳಗೆ ನಡೆಯುತ್ತದೆ. ಜಿಲ್ಲೆಯ ಹಲವು ದೇವಾಲಯಗಳಲ್ಲಿ ವೃಷಭ ಮಾಸದ ಹತ್ತನಾವಧಿ ದಿನದಂದು ದೇವರ ನಿತ್ಯೋತ್ಸವ ಕೊನೆಯಾಗುತ್ತದೆ.
ಹುಣ್ಣಿಮೆಯಂದು ರಾತ್ರಿ ಶ್ರೀ ಅನಂತಪದ್ಮನಾಭ ದೇವರ ಜೋಡುಬಲಿ ಉತ್ಸವ, ಕ್ಷೇತ್ರಪಾಲ ಪೂಜೆಯೊಂದಿಗೆ ವಸಂತ ಮಂಟಪದಲ್ಲಿ ದೇವರಿಗೆ ವಸಂತ ಪೂಜೆ ನಡೆಯುತ್ತದೆ. ದೇವಸ್ಥಾನದೊಳಗೆ ಜೋಡುಬಲಿ ನಡೆದ ಬಳಿಕ ದೇವರಿಗೆ ಮಾನಸ ಪೂಜೆ ನಡೆಯಿತು. ಭಕ್ತರಿಗೆ ಪ್ರಸಾದ ರೂಪದಲ್ಲಿ ಅರಿಶಿನ ಪ್ರಸಾದ ನೀಡಲಾಯಿತು. ಹಿಂದಿನಿಂದಲೂ ನಡೆದುಕೊಂಡು ಬಂದ ಧಾರ್ಮಿಕ ಸಂಪ್ರದಾಯದಂತೆ ಕ್ಷೇತ್ರದಲ್ಲಿ ದೀಪಾವಳಿವರೆಗೆ ಆಶ್ಲೇಷ ಬಲಿ, ರಾತ್ರಿ ಹೂವಿನ ಪೂಜೆ, ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ ಮೊದಲಾದ ಸೇವೆಗಳು ನಿರಂತರ ನಡೆಯಲಿವೆ. ಮುಂಬರುವ ದೀಪಾವಳಿ ಅಮಾವಾಸ್ಯೆಯಂದು ದೇವರ ಬಲಿ ಹೊರಟು ಮತ್ತೆ ನಿತ್ಯ ಉತ್ಸವ ಪ್ರಾರಂಭವಾಗಲಿವೆ.
ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಹಾಗೂ ತಂತ್ರಿ ಕೆ.ನರಸಿಂಹ ತಂತ್ರಿ, ಆನುವಂಶಿಕ ಮೊಕ್ತೇಸರ ಹಾಗೂ ಆನುವಂಶಿಕ ಅರ್ಚಕ ಕೆ.ಮನೋಹರ ಭಟ್, ಆನುವಂಶಿಕ ಮೊಕ್ತೇಸರ ಹಾಗೂ ಪವಿತ್ರಪಾಣಿ ಕೆ.ಬಾಲಕೃಷ್ಣ ಕಾರಂತ, ಮೊಕ್ತೇಸರ ಭಾಸ್ಕರ ಕೆ. ಹಾಗೂ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.