ಜಿಲ್ಲೆ

ನೌಕಾಸೇನೆಯ ಮಾಹಿತಿ ಪಾಕಿಸ್ತಾನಕ್ಕೆ ಹಂಚಿಕೆ: ಕಾರವಾರದಲ್ಲಿ ಎನ್‌ಐಎ ದಾಳಿ

Uttara Kannada - Subash Hegde

ಕಾರವಾರ: ಭಾರತೀಯ ನೌಕಾಸೇನೆಯ ಮಾಹಿತಿಗಳನ್ನು ಶತ್ರು ರಾಷ್ಟ್ರಗಳಿಗೆ ಬಹಿರಂಗ ಮಾಡುತ್ತಿದ್ದ ಅನುಮಾನದ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಕಾರವಾರ, ಅಂಕೋಲಾದ ಮೂವರನ್ನು ಬುಧವಾರ ವಿಚಾರಣೆ ನಡೆಸಿ, ನೋಟಿಸ್ ನೀಡಿ, ಬಿಡುಗಡೆ ಮಾಡಿದ್ದಾರೆ.
ಕದಂಬ ನೌಕಾನೆಲೆಯ ಶಿಪ್ ರಿಪೇರ್ ಯಾರ್ಡ್ (ಎನ್‌ಎಸ್‌ಆರ್‌ವೈ)ನಲ್ಲಿ ಖಾಸಗಿ ಕಂಪನಿಯ ಪರವಾಗಿ ಕೆಲಸ ಮಾಡುತ್ತಿದ್ದ ಕಾರವಾರ ಮುದಗಾದ ವೇತನ ತಾಂಡೇಲ ಅಂಕೋಲಾದ ಅಕ್ಷಯ ನಾಯ್ಕ ಹಾಗೂ ಅರಗಾದ ಸುನೀಲ ನಾಯ್ಕ ವಿಚಾರಣೆಗೆ ಒಳಗಾದವರು.
ಸುನೀಲ ನಾಯ್ಕ ಸದ್ಯ ಗೋವಾದಲ್ಲಿ ಉದ್ಯೋಗದಲ್ಲಿದ್ದ. ಅಕ್ಷಯ ನಾಯ್ಕ ವೇತನ ತಾಂಡೇಲ ನೌಕಾಸೇನೆಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಅಕ್ಷಯ ಎಂಬುವವನನ್ನು ಸ್ಥಳದಲ್ಲೇ ವಿಚಾರಣೆ ಮಾಡಿ ಬಿಟ್ಟಿದ್ದು, ವೇತನ ತಾಂಡೇಲನನ್ನು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಗೆ ಕರೆತಂದು ಎನ್‌ಐಎ ಡಿವೈಎಸ್‌ಪಿ ಹಾಗೂ ಮೂವರು ಇನ್ಸ್ಪೆಕ್ಟರ್‌ಗಳು ಬುಧವಾರ ಮಧ್ಯಾಹ್ನದಿಂದ ಸಾಯಂಕಾಲದವರೆಗೂ ವಿಚಾರಣೆ ನಡೆಸಿದರು.
ಇವರಿಗೆ ಮುಂಬೈನಿಂದ ಕರೆ ಮಾಡುತ್ತಿದ್ದ ವ್ಯಕ್ತಿ ಹಡಗುಗಳ ಮಾಹಿತಿ ಕೇಳುತ್ತಿದ್ದ ಎನ್ನಲಾಗಿದೆ. ಮಾಹಿತಿ ನೀಡಿದ್ದಕ್ಕಾಗಿ ಅವರ ಖಾತೆಗೆ ಹಣವನ್ನೂ ಹಾಕಲಾಗಿತ್ತು ಎನ್ನಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಮಾಹಿತಿ ನೀಡಲು ಎನ್‌ಐಎ ಅಧಿಕಾರಿಗಳು ನಿರಾಕರಿಸಿದ್ದಾರೆ.
ವಿಜಯವಾಡ ಕೇಸ್ ಲಿಂಕ್..?
ನೌಕಾಸೇನೆಯ ಮಾಹಿತಿಗಳನ್ನು ಪಾಕಿಸ್ತಾನಿ ಗುಪ್ತರರರಿಗೆ ನೀಡುತ್ತಿದ್ದ ಆರೋಪದ ಮೇಲೆ 2023 ರ ಮೇ ನಲ್ಲಿ ಆಂಧ್ರ ಪ್ರದೇಶದ ವಿಜಯವಾಡಾ ಗುಪ್ತಚರ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಅದೇ ಪ್ರಕರಣವನ್ನು ಹಸ್ತಾಂತರಿಸಿಕೊಂಡ ಎನ್‌ಐಎ ಜುಲೈನಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಿ, ನವೆಂಬರ್ ಹೊತ್ತಿಗೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಅದರಲ್ಲಿ ಯುಪಿ ಮೂಲದ ಅಶೋಕ ಸೋಲಂಕಿ ಹಾಗೂ ಮೀರ್ ಭಜಲ್ ಖಾನ್ ಎಂಬುವವ ವಿರುದ್ಧ ಆರೋಪಗಳಿದ್ದವು. ನೌಕಾಸೇನೆಯ ವಿಶಾಖಾಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಶೋಕ ಸೋಲಂಕಿ ನೌಕಾಸೇನೆಯ ಮಾಹಿತಿಯನ್ನು ಪಾಕಿಸ್ತಾನಿ ಏಜೆಂಟ್ ಮೀರ್ ಭಲಜ್ ಖಾನ್‌ಗೆ ಕಳಿಸಿದ್ದ. ಅದಕ್ಕಾಗಿ ಹಣವನ್ನೂ ಪಡೆದಿದ್ದ ಎಂದು ಆರೋಪಿಸಲಾಗಿತ್ತು. ಇದೇ ತನಿಖೆ ಮುಂದುವರಿಸಿದ ಎನ್‌ಐಎ ಮುಂಬೈನ ಮನಮೋಹನ ಸುರೇಂದ್ರ ಪಾಂಡಾ ಎಂಬಾತನ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಿತ್ತು. ಅಲ್ಲದೇ ಕಳೆದ ಮೇ ತಿಂಗಳಲ್ಲಿ ಅಮ್ಮನ್ ಸಲೀಂ ಶೇಖ್ ಎಂಬಾತನ ವಿರುದ್ಧ ವಿಶಖಾಪಟ್ಟಣ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು. ಇದೇ ಪ್ರಕರಣ ವಿಚಾರಣೆ ಮುಂದುವರಿದು ಕಾರವಾರದ ಮೂವರ ಬಗ್ಗೆ ವಿಚಾರಣೆ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇದೆ.
ವಿಶಾಖಪಟ್ಟಣದಲ್ಲೂ ದಾಳಿ:
ಇದೇ ವೇಳೆ ಹೈದ್ರಾಬಾದ್‌ನ ಎನ್‌ಐಎ ಅಽಕಾರಿಗಳು ಕೊಚ್ಚಿನ್ ಶಿಪ್ ಯಾರ್ಡ್ ಮೇಲೆ ದಾಳಿ ಮಾಡಿದ್ದು, ಮಾಹಿತಿ ಕಲೆ ಹಾಕಿದ್ದಾರೆ. ಸ್ವದೇಶಿ ನಿರ್ಮಿತ ಭಾರತೀಯ ನೌಕಾಸೇನೆಯ ದೈತ್ಯ ನೌಕೆ ಐಎನ್‌ಎಸ್ ವಿಕ್ರಾಂತ್‌ದಿಂದ 2019 ರಲ್ಲಿ ಹಾರ್ಡ್ ಡಿಸ್ಕ್ ಹಾಗೂ ರ‍್ಯಾಮ್ ಕಳುವಿನ ವಿಚಾರವಾಗಿ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.