ಜಿಲ್ಲೆ

ಹಾರದ ಜತೆ ಮಾಸ್ಕ್​ನ್ನೂ ಬದಲಿಸಿಕೊಂಡ ಜೋಡಿ! ಸರಳ ಮದುವೆಗೆ ಸಾರ್ವಜನಿಕರ ಮೆಚ್ಚುಗೆ

ಗದಗ: ಕರೊನಾ ಬಾರದಂತೆ ತಡೆಯಲು ಮಾಸ್ಕ್​ ಮತ್ತು ದೈಹಿಕ ಅಂತರವೇ ಮೊದಲ ಅಸ್ತ್ರ. ಅದನ್ನು ವಧು ವರರು ಮದುವೆಯಲ್ಲಿ, ಪರಸ್ಪರ ಹಾರ ಬದಲಾಯಿಸಿಕೊಂಡಂತೆ ಮಾಸ್ಕ್​ನ್ನೂ ಬದಲಿಸಿಕೊಂಡಿರುವ ಘಟನೆ ಗದಗದಲ್ಲಿ ನಡೆದಿದೆ.

ಗದಗ ನಗರದ ನೌಕರ ಭವನ ಸಮೀಪದ ನಿವಾಸವೊಂದರಲ್ಲಿ ಈ ರೀತಿಯ ಮದುವೆ ನಡೆದಿದೆ. ಗಾಂಜಿ ಕುಟುಂಬಸ್ಥರು ಈ ರೀತಿಯ ಸರಳ ಮದುವೆ ನಡೆಸಿದ್ದಾರೆ. ವರ ಮಂಜುನಾಥ್​ ವಧು ಸವಿತಾಳಿಗೆ ಮಾಸ್ಕ್​ ತೊಡಿಸಿದ್ದಾನೆ. ಅದಾದ ನಂತರ ವಧು ಕೂಡ ವರನಿಗೆ ಮಾಸ್ಕ್​ ತೊಡಿಸಿದ್ದಾಳೆ.

ಅಂದ ಹಾಗೆ ಈ ಮದುವೆಗೆ ಬಂಧು ಬಳಗದವರನ್ನೂ ಕರೆದಿಲ್ಲವಂತೆ. ಎಲ್ಲರಿಗೂ ಅವರವರ ಮನೆಯಿಂದಲೇ ಆಶೀರ್ವಾದ ಮಾಡುವಂತೆ ತಿಳಿಸಲಾಗಿದೆಯಂತೆ. ಕೆಲವೇ ಕೆಲವು ಕುಟುಂಸ್ಥರ ಸಮ್ಮುಖದಲ್ಲಿ ಮದುವೆ ಕಾರ್ಯಕ್ರಮ ನಡೆಸಲಾಗಿದೆ. ಕರೊನಾ ನಿಯಮವಾಳಿಗಳನ್ನು ಮುರಿಯದೆ ಸರಳವಾಗಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಲಾರಂಭಿಸಿದ್ದಾರೆ.