ಕಾರವಾರ New Year: ಭಾರಿ ಮದ್ಯದ (Liquor) ಬಳಕೆಯೊಂದಿಗೆ ಜಿಲ್ಲೆಯ ಜನ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಡಿಸೆಂಬರ್ 31 ರ ಒಂದೇ ದಿನ 8 ಸಾವಿರಕ್ಕೂ ಹೆಚ್ಚು ಪೆಟ್ಟಿಗೆ ಮದ್ಯ ಜಿಲ್ಲೆಯಲ್ಲಿ ಮಾರಾಟವಾಗಿದೆ.
ಹೌದು, ಹೊಸ ವರ್ಷಾಚರಣೆ ಎಂದರೆ ಮದ್ಯ ಸಮಾರಾಧನೆ ಎಂಬಂತಾಗಿದೆ. ಇದರಿಂದ ವಿವಿಧೆಡೆಯಿಂದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಬಾರ್, ವೈನ್ ಸ್ಟೋರ್, ರೆಸಾರ್ಟ್ಗಳು ಮಾತ್ರವಲ್ಲದೇ ಕೆಲವು ಹೋಂ ಸ್ಟೇಗಳೂ ಒಂದು ದಿನದ ವಿಶೇಷ ಪರವಾನಗಿ ಪಡೆದು ಮದ್ಯ ಮಾರಾಟ ಮಾಡಿವೆ.
ಅಬಕಾರಿ ಇಲಾಖೆಯ ಲೆಕ್ಕಾಚಾರದಂತೆ ಡಿಸೆಂಬರ್ 31 ರಂದು ಒಟ್ಟು 8102 ಬಾಕ್ಸ್ ಮದ್ಯ ಹಾಗೂ 7258 ಬಾಕ್ಸ್ ಬಿಯರ್ ಬಿಕರಿಯಾಗಿದೆ. ಜಿಲ್ಲೆಯ ಎಲ್ಲ ಬಾರ್, ಮದ್ಯದ ಪರವಾನಗಿ ಹೊಂದಿದ ರೆಸಾರ್ಟ್ಗಳಿಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ(ಕೆಎಸ್‌ಬಿಸಿಎಲ್)ದಿಂದ ಮದ್ಯವನ್ನು ಪೂರೈಸಲಾಗುತ್ತದೆ. ಜಿಲ್ಲೆಯ ಕರಾವಳಿ ಭಾಗಕ್ಕೆ ಹೊನ್ನಾವರದ ಕೆಎಸ್‌ಡಿಸಿಎಲ್ ಉಗ್ರಾಣದಿಂದ. ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಮುಂಡಗೋಡ ತಾಲೂಕುಗಳಿಗೆ ಶಿರಸಿಯ ಉಗ್ರಾಣದಿಂದ, ಹಳಿಯಾಳ, ದಾಂಡೇಲಿ, ಜೊಯಿಡಾಕ್ಕೆ ಹುಬ್ಬಳ್ಳಿಉ ಉಗ್ರಾಣದಿಂದ ಮದ್ಯವನ್ನು ಪೂರೈಸಲಾಗಿದೆ. ಸಾಮಾನ್ಯ ದಿನಗಳಲ್ಲಿ ಜಿಲ್ಲೆಯ 5 ರಿಂದ 6 ಸಾವಿರ ಬಾಕ್ಸ್ ಮದ್ಯ ದಿನನಿತ್ಯ ಮಾರಾಟವಾಗುತ್ತದೆ. ಈ ಬಾರಿ ಹೊಸ ವರ್ಷದ ಹಿನ್ನೆಲೆಯಲ್ಲಿ ಸುಮಾರು 2 ರಿಂದ 3 ಸಾವಿರ ಬಾಕ್ಸ್ ಹೆಚ್ಚುವರಿ ಮದ್ಯ ಮಾರಾಟವಾದಂತಾಗಿದೆ ಎಂದು ಅಬಕಾರಿ ಉಪ ಆಯುಕ್ತ ಜಗದೀಶ ಎನ್.ಕೆ.ತಿಳಿಸಿದ್ದಾರೆ.
ಮದ್ಯ ಮಾರಾಟ ಮಾಡಲು ಎಲ್ಲ ಹೋಟೆಲ್, ರೆಸಾರ್ಟ್ಗಳಿಗೆ ಅನುಮತಿ ಇಲ್ಲ. ವೈನ್ ಶಾಪ್, ಬಾರ್‌ಗಳನ್ನು ಹೊರತಾಗಿ ಜಿಲ್ಲೆಯ ಕೆಲವೇ ರೆಸಾರ್ಟ್ಗಳು ಮದ್ಯ ಮಾರಾಟದ ಕಾಯಂ ಪರವಾನಗಿ ಹೊಂದಿವೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಜಿಲ್ಲೆಯ 10 ಅತಿಥಿ ಸತ್ಕಾರ ಸಂಸ್ಥೆಗಳು ಒಂದು ದಿನದ ವಿಶೇಷ ಪರವಾನಗಿ(ಸಿಎಲ್-5) ಹೊಂದಿದ್ದವು. ಶಿರಸಿ, ದಾಂಡೇಲಿಯಲ್ಲಿ ತಲಾ 1 ಹಾಗೂ ಗೋಕರ್ಣದಲ್ಲಿ 8 ರೆಸಾರ್ಟ್ ಹೋಟೆಲ್‌ಗಳು ಸಿಎಲ್-5 ಪರವಾನಗಿ ಪಡೆದು ಮದ್ಯ ಹಂಚಿದವು. ದಾಂಡೇಲಿಯಲ್ಲಿ 849 ಬಾಕ್ಸ್ ಮದ್ಯ ಬಿಕರಿಯಾಗಿದ್ದರೆ. ಕರಾವಳಿಯ ತಾಲೂಕುಗಳಲ್ಲಿ 2694 ಬಾಕ್ಸ್ ಮದ್ಯ ಮಾರಾಟವಾಗಿದೆ.
ಕಾರವಾರದ ಹೋಟೆಲ್‌ಗಳು, ಲಾಡ್ಜ್ಗಳು ಮಂಗಳವಾರ ಖಾಲಿಯಾಗಿದ್ದವು. ಪ್ರವಾಸಿಗರ ಸಂಖ್ಯೆ ತೀರ ಕಡಿಮೆ ಇತ್ತು. ಆದರೆ, ಪಕ್ಕದ ಗೋವಾ ತುಂಬಿ ತುಳುಕುತ್ತಿತ್ತು. ಸ್ಥಳೀಯರು ಮಂಗಳವಾರ ಸಾಯಂಕಾಲವೇ ಗೋವಾ ಭಾಗಕ್ಕೆ ತೆರಳಿ ಮದ್ಯದ ಪಾರ್ಟಿಗಳಲ್ಲಿ ತೊಡಗಿದರು. ಕಾರವಾರಕ್ಕೆ ಹೋಲಿಸಿದರೆ, ಗೋವಾದಲ್ಲಿ ಮದ್ಯದ ಬೆಲೆ ಅರ್ಧಕ್ಕರ್ಧ ಕಡಿಮೆ ಇರುವುದರಿಂದ ಇಲ್ಲಿನ ಮದ್ಯ ಪ್ರಿಯರು ಗೋವಾಕ್ಕೆ ತೆರಳುವುದು ಸಾಮಾನ್ಯ.
ಇದನ್ನೂ ಓದಿ: King Cobra: ಮತ್ತಿಘಟ್ಟಾದಲ್ಲಿ 10.5 ಉದ್ದದ ಕಾಳಿಂಗ ಸೆರೆhttps://www.vijayavani.net/king-cobra-catchedhttps://youtu.be/CJStTBsSN1A