ಮಾಳ ಘಾಟಿ ಹೆದ್ದಾರಿಯಲ್ಲಿ ಗಿಡಗಂಟಿಗಳು ರಸ್ತೆಗೆ ಉರುಳಿರುವುದು. 
ಜಿಲ್ಲೆ

ಘಾಟಿ ಹೆದ್ದಾರಿಯಲ್ಲಿ ನೆಟ್‌ವರ್ಕ್ ಸಮಸ್ಯೆ

Avinash R

-ಹರಿಪ್ರಸಾದ್ ನಂದಳಿಕೆ ಕಾರ್ಕಳ

ದಟ್ಟ ಅರಣ್ಯದ ನಡುವೆ ಹಾದುಹೋಗಿರುವ ಕುದುರೆಮುಖ-ಮಾಳ ರಾಷ್ಟ್ರೀಯ ಹೆದ್ದಾರಿ ತುಂಬ ಅಪಾಯಕಾರಿಯಾಗಿದೆ. ಒಂದೆಡೆ ತಿರುವು ರಸ್ತೆ ಹಾಗೂ ಈ ಭಾಗದಲ್ಲಿ ಮಳೆ ಪ್ರಾಮಾಣ ಹೆಚ್ಚಿದ್ದು ವಾಹನ ಸವಾರರು ಸ್ವಲ್ಪ ಮೈ ಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ.

ಈ ಭಾಗದ ರಸ್ತೆಯಲ್ಲಿ ನಿತ್ಯ ನೂರಾರು ಪ್ರವಾಸಿ ವಾಹನ ಸಂಚರಿಸುತ್ತಿದ್ದು ಮಳೆಗಾಲದ ಸಂದರ್ಭ ಇಲ್ಲಿನ ರಸ್ತೆ ಸಂಚಾರ ಕಷ್ಟಕರವಾಗಿದೆ. ಅರಣ್ಯ ಪ್ರದೇಶದಲ್ಲಿ ಗುಡ್ದ ಕುಸಿದು ಬಂಡೆ, ಮಣ್ಣು ಹಾಗೂ ರಸ್ತೆಯ ಬದಿಯ ಬೃಹತ್ ಗಾತ್ರ ಮರಗಳು ರಸ್ತೆಗೆ ಉರುಳಿ ಬೀಳುವುದು ಇಲ್ಲಿ ಮಾಮೂಲು.

ತನಿಕೋಡು ಅರಣ್ಯ ತಪಾಸಣಾ ಕೇಂದ್ರದಿಂದ ಮಾಳ ಅರಣ್ಯ ತಪಾಸಣಾ ಕೇಂದ್ರದವರೆಗೆ ಒಟ್ಟು 39 ಕಿ.ಮೀ. ವ್ಯಾಪ್ತಿಯ ರಸ್ತೆ ತಿರುವು ಮುರುವು ಆಗಿದ್ದು, ಈ ಹೆದ್ದಾರಿಯಲ್ಲಿ ವಾಹನ ಚಲಾಯಿಸುವುದು ಚಾಲಕರಿಗೆ ಸವಾಲಾಗಿದೆ. ಈಗಾಗಲೇ ಈ ರಸ್ತೆಯಲ್ಲಿ ಅನೇಕ ಅಪಘಾತ ನಡೆದು ಸಾವು, ನೋವು ಸಂಭವಿಸಿದೆ. ಕಾರ್ಕಳ ತಾಲೂಕಿನ ಗಡಿ ಭಾಗದಲ್ಲಿರುವ ಎಸ್‌ಕೆ ಬಾರ್ಡರ್‌ನಿಂದ ಮೇಲೆ ಹೋಗುವ ಈ ರಸ್ತೆ ಬಲು ಅಪಾಯಕಾರಿ. ರಸ್ತೆಯುದ್ದಕ್ಕೂ ಅಪಾಯಕಾರಿ ತಿರುವು ಅದೆಷ್ಟೋ ಪ್ರಾಣಗಳನ್ನು ಬಲಿಪಡೆದಿದೆ.

ತುರ್ತು ವ್ಯವಸ್ಥೆಗಳಿಲ್ಲ

ಮಾಳ ಘಾಟಿ ರಸ್ತೆಯುದ್ದಕ್ಕೂ ನೆಟ್‌ವರ್ಕ್ ಸಿಗುವುದಿಲ್ಲ. ಅವಘಡ ನಡೆದಾಗ ಸಂಪರ್ಕ ಸಾಧ್ಯವಾಗುವುದಿಲ್ಲ. ಹೆದ್ದಾರಿ ನಡುವೆ ಅಪಘಾತವಾದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗೆ ಮಾರ್ಗ ಮಧ್ಯೆ ಎಲ್ಲೂ ಆಸ್ಪತ್ರೆಗಳಿಲ್ಲ. ತುರ್ತು ಚಿಕಿತ್ಸೆ ಕೊಡಿಸಲು ಶೃಂಗೇರಿ ತಾಲೂಕಿನಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದಿರುವ ಕಾರಣ ಗಾಯಾಳುಗಳನ್ನು ಕಾರ್ಕಳ ಮೂಲಕ ಮಂಗಳೂರು ಅಥವಾ ಮಣಿಪಾಲಕ್ಕೆ ಒಯ್ಯಬೇಕು. ಅಪಘಾತವಾದರೆ ಇತರ ವಾಹನದವರು ಗೇಟ್ ಸಿಬ್ಬಂದಿಗೆ ಮಾಹಿತಿ ನೀಡಿ ಅವರು ಸಂಬಂಧಿಸಿದವರನ್ನು ಸಂಪರ್ಕಿಸಿ ತಿಳಿಸಬೇಕಾದ ಸ್ಥಿತಿಯಿದೆ. ಹೀಗಾಗಿ ತುರ್ತು ವ್ಯವಸ್ಥೆಗಾಗಿ ಪರದಾಟ ನಡೆಸುವಂತಾಗುತ್ತಿದ್ದು ಸೂಕ್ತ ವ್ಯವಸ್ಥೆ ಅಗತ್ಯವಿದೆ.

ತನಿಕೋಡು ಅರಣ್ಯ ತಪಾಸಣಾ ಕೇಂದ್ರದಿಂದ ಮಾಳ ಅರಣ್ಯ ತಪಾಸಣಾ ಕೇಂದ್ರದವರೆಗೆ ಒಟ್ಟು 39 ಕಿ.ಮೀ. ವ್ಯಾಪ್ತಿಯಲ್ಲಿ ಸಂವಹನಕ್ಕೆ ಸಂಬಂಧಿಸಿದಂತೆ ವಯರ್‌ಲೆಸ್ ಮೊಬೈಲ್ ಸಂಪರ್ಕದ ವ್ಯವಸ್ಥೆ ಸಮರ್ಪಕವಾಗಿಲ್ಲ. ಮಾಳ ಅರಣ್ಯ ಇಲಾಖೆಯ ತಪಾಸಣಾ ಗೇಟು, ಎಸ್‌ಕೆ ಬಾರ್ಡರ್ ದಾಟಿ ಮುಂದಕ್ಕೆ ಕಳಸ, ಶೃಂಗೇರಿ ಹಾಗೂ ಇನ್ನಿತರ ಸ್ಥಳಗಳಿಗೆ ಸಾಗುವ ದಾರಿ ಮಧ್ಯೆ ಮಾಳ ತಪಾಸಣೆ ಗೇಟ್‌ನಿಂದ ಕುದುರೆಮುಖ ಹಾಗೂ ಶೃಂಗೇರಿಗೆ ಕವಲೊಡೆಯುವ ಜಂಕ್ಷನ್ ತನಕದ ನಡುವಿನ ಪ್ರದೇಶದಲ್ಲಿ ಮಧ್ಯೆ ನೆಟ್‌ವರ್ಕ್ ಸಿಗುವುದಿಲ್ಲ.

ರಾತ್ರಿ ಹೊತ್ತಲ್ಲಿ ಅಪಘಾತ ಸಂಭವಿಸಿದರೆ ಬೆಳಗ್ಗಿನ ತನಕ ಏನೂ ಮಾಡುವಂತಿಲ್ಲ. ರಕ್ಷಣೆಗೆ ಯಾವ ವ್ಯವಸ್ಥೆಗಳೂ ಇಲ್ಲಿಲ್ಲ. ಕನಿಷ್ಠ ಮಳೆಗಾಲದ ಅವಧಿಯಲ್ಲಾದರೂ ಘಾಟಿ ಮಾರ್ಗದಲ್ಲಿ 24 ತಾಸುಗಳ ವಿಶೇಷ ಕಾರ್ಯಪಡೆ, ಗಸ್ತು ಪಡೆ ತಂಡ ನಿಯೋಜಿಸುವ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ವಾಹನ ಸವಾರರು ಜಾಗ್ರತೆ ವಹಿಸುವುದು ಬಹುಮುಖ್ಯ. ಇದುವರಗೆ ಘಾಟಿ ರಸ್ತೆ ಸಹಿತ ಸಂಭವಿಸಿದ ಅನಾಹುತಗಳಲ್ಲಿ ಬಹುತೇಕ ಸವಾರರ ನಿರ್ಲಕ್ಷೃದ ಚಾಲನೆಯಿಂದಲೇ ಆಗಿದೆ. ಸವಾರರೇ ಜಾಗ್ರತೆಯಿಂದ ವಾಹನ ಚಾಲನೆ ಮಾಡಬೇಕು. ಅವಘಢ, ಅನಾಹುತಗಳಾಗದಂತೆ ಏನೇನು ಸುರಕ್ಷಾ ಕ್ರಮ ನಮ್ಮ ವ್ಯಾಪ್ತಿಯೊಳಗೆ ತೆಗೆದುಕೊಳ್ಳಲು ಸಾಧ್ಯವಿದೆಯೋ ಅದೆಲ್ಲವನ್ನು ಇಲಾಖೆಗಳ ಸಮನ್ವಯತೆಯೊಂದಿಗೆ ತೆಗೆದುಕೊಳ್ಳುತ್ತಿದ್ದೇವೆ.-ನಾಗರಾಜ್ ಟಿ.ಡಿ.m ವೃತ್ತ ನಿರೀಕ್ಷರು ಕಾರ್ಕಳ