ಜಿಲ್ಲೆ

ಪುರಸಭೆ ಸುಪರ್ದಿಗೆ ನೆಹರು ಮೈದಾನ!

ವಿಜಯವಾಣಿ ಸುದ್ದಿಜಾಲ ಕುಂದಾಪುರ ಕುಂದಾಪುರದ ನೆಹರು ಮೈದಾನ ಕೊನೆಗೂ ಪುರಸಭೆ ಅಧೀನಕ್ಕೆ ಸೇರ್ಪಡೆಗೊಳ್ಳುವಲ್ಲಿ ಯಶಸ್ವಿಯಾಗಿದ್ದು, ಜಿಲ್ಲಾಧಿಕಾರಿ ಆದೇಶದ ಅನ್ವಯ ಕಂದಾಯ ಇಲಾಖೆ ಹಸ್ತಾಂತರ ಪ್ರಕ್ರಿಯೆ ನಡೆಸಲಿದೆ. ಸುಮಾರು 2.6 ಎಕರೆ ಮೈದಾನ ಭೂಮಿ ಪುರಸಭೆಗೆ ಸಂಬಂಧಿಸಿದ್ದು, ಆದರೆ ಪುರಸಭೆಯ ಅನುಮತಿ ಪಡೆಯದೆ ತೆರಿಗೆ ಇಲಾಖೆ, ಶಾಲಾ-ಕಾಲೇಜು, ಹಾಸ್ಟೆಲ್, ಯುವಜನ ಸೇವಾ ಇಲಾಖೆ ಸಹಿತ ವಿವಿಧ ಇಲಾಖೆಗಳಿಗೆ ಕಂದಾಯ ಇಲಾಖೆಗಳಿಗೆ ಭೂಮಿ ಹಂಚಲಾಗಿತ್ತು. ರಂಗಮಂದಿರ ನಿರ್ಮಾಣಗೊಂಡ ಆರು ಸೆಂಟ್ಸ್ ಜಾಗ ಪುರಸಭೆ ಹೆಸರಿನಲ್ಲಿದ್ದು, ಉಳಿದ ಭೂ ಪ್ರದೇಶವೂ ಈಗ ಪುರಸಭೆಗೆ ಹೆಸರಿಗೆ ಸೇರ್ಪಡೆಯಾಗಲಿದೆ. ದಾಖಲೆಗಳ ತಿದ್ದುಪಡಿ: ಕುಂದಾಪುರ ಪುರಸಭೆ ವ್ಯಾಪ್ತಿಯ ವಡೇರಹೋಬಳಿ ಗ್ರಾಮದಲ್ಲಿರುವ ಮೈದಾನಕ್ಕೆ ಸಂಬಂಧಿಸಿದ ಪಹಣಿ ಪತ್ರದಲ್ಲಿ ಪಂಚಾಯಿತಿ ಬೋರ್ಡ್ ಪ್ರೆಸಿಡೆಂಟ್ ಎಂಬ ಹೆಸರು ದಾಖಲಾಗಿದ್ದು, 1959ರಲ್ಲಿ ಜಿಲ್ಲಾ ಬೋರ್ಡ್ ರದ್ದಾಗಿ 1972ರಲ್ಲಿ ಪುರಸಭೆಯಾಗಿ ಮಾರ್ಪಾಡಾಯಿತು. ಪ್ರಸ್ತುತ ಪುರಸಭೆಯ ಸುವರ್ಣ ಮಹೋತ್ಸವ ನೆರವೇರಿದರೂ ಭೂಮಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಪಂಚಾಯಿತಿ ಬೋರ್ಡ್ ಹೆಸರು ಬದಲಿಗೆ ಪುರಸಭೆ ಹೆಸರು ದಾಖಲಿಸಲು ಇದುವರೆಗೆ ಸಾಧ್ಯವಾಗಿರಲಿಲ್ಲ. ಮೈದಾನ ಭೂಮಿಗೆ ಸಂಬಂಧಿಸಿದಂತೆ ದಾಖಲೆಗಳಲ್ಲಿ ಹೆಸರು ಬದಲಿಸುವಂತೆ ಪುರಸಭೆ ನಡೆಸಿದ ಸತತ ಪ್ರಯತ್ನದ ಪರಿಣಾಮ ಕೊನೆಗೂ ದಾಖಲಾತಿಗಳಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ. ಮೈದಾನ ಹಸ್ತಾಂತರ ನಡೆಸುವುದರ ಜತೆಗೆ ಕಂದಾಯ ಇಲಾಖೆಯಿಂದ ಷರತ್ತುಗಳು ನಿಗದಿಗೊಂಡಿದ್ದು, ಮೈದಾನವನ್ನು ಅನ್ಯ ಉದ್ದೇಶಕ್ಕೆ, ಕಟ್ಟಡ ನಿರ್ಮಾಣ ಹಾಗೂ ಪರಭಾರೆಗೊಳಿಸುವಂತಿಲ್ಲ ಎಂದು ತಿಳಿಸಿದೆ. ದಾಖಲಾತಿ ಹಸ್ತಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಸಹಾಯಕ ಕಮಿಷನರ್ ಆದೇಶಕ್ಕೂ ಕಿಮ್ಮತ್ತಿಲ್ಲ

ಭೂಮಿಗೆ ಸಂಬಂಧಿಸಿದ ದಾಖಲೆಗಳ (ಕಾಲಂ ನಂ.9) ತಿದ್ದುಪಡಿ ಮಾಡುವಂತೆ 2017ರ ಏ.7ರಲ್ಲೇ ಕುಂದಾಪುರ ಸಹಾಯಕ ಕಮಿಷನರ್ ಆದೇಶಿಸಿದ್ದರು. ಆದರೆ ಎಂಟು ವರ್ಷಗಳೇ ಉರುಳಿದರೂ ಕುಂದಾಪುರ ತಾಲೂಕು ಪಂಚಾಯಿತಿ ವತಿಯಿಂದ ದಾಖಲೆ ತಿದ್ದುಪಡಿ ಮಾತ್ರ ಆಗಿರಲಿಲ್ಲ.

ವರದಿಯಿಂದ ಎಚ್ಚೆತ್ತ ಅಧಿಕಾರಿಗಳು

ಮೈದಾನ ಹಸ್ತಾಂತರಕ್ಕೆ ಸಂಬಂಧಿಸಿ ವಿಜಯವಾಣಿಯು ಸತತ ವರದಿಗಳನ್ನು ಪ್ರಕಟಿಸಿದ್ದು, ಇದರಿಂದ ಎಚ್ಚೆತ್ತ ಸಂಬಂಧಿತ ಅಧಿಕಾರಿಗಳು ಮೈದಾನ ಹಸ್ತಾಂತರ ಹಾಗೂ ದಾಖಲೆಗಳಲ್ಲಿ ಹೆಸರು ತಿದ್ದುಪಡಿ ಕಾರ್ಯಕ್ಕೆ ವೇಗ ನೀಡಿದ್ದಾರೆ.

ಸಹಾಯಕ ಕಮಿಷನರ್, ತಹಸೀಲ್ದಾರ್ ಶಿಫಾರಸಿನ ಪ್ರಕಾರ ವಡೇರಹೋಬಳಿ ಗ್ರಾಮದ ಸರ್ವೆ ನಂ. 110/2ಎ 3ರಲ್ಲಿ 1.35 ಎಕರೆ ಸ್ಥಳವನ್ನು ಪರಂಬೋಕು ಕ್ರಿಕೆಟ್ ಮೈದಾನ ಸ್ಥಳವನ್ನಾಗಿ ಗುರುತಿಸಿ ಸಾರ್ವಜನಿಕ ಉದ್ದೇಶಕ್ಕಾಗಿ ಕಾದಿರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಶ್ರೀ ಪುರಸಭೆಗೆ ಈ ಜಾಗ ಹಸ್ತಾಂತರಿಸುವ ಕಾರ್ಯ ನಡೆಯಲಿದೆ. ದಿನೇಶ, ಕುಂದಾಪುರ ಕಂದಾಯ ನಿರೀಕ್ಷಕ