

ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನಿರಂತರ ಹೋರಾಟದ ಫಲವಾಗಿ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಸರ್ಕಾರಿ ನೌಕರರ ಸಂದ ಅಧ್ಯಕ್ಷ ಕೆ.ದಿನಕರ ಶೆಟ್ಟಿ ಅಂಪಾರು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸರ್ಕಾರಿ ನೌಕರರಿಗೆ 7ನೇ ವೇತನವನ್ನು ಯಥಾವತ್ ಜಾರಿಗೆ ತಂದಿದ್ದರು. ಅದರ ಬೆನ್ನಲೇ ಆರೋಗ್ಯ ಸಂಜೀವಿನಿ ಸೌಲಭ್ಯವನ್ನೂ ನೀಡಿದ್ದರಿಂದ ರಾಜ್ಯದ 5.60 ಲಕ್ಷ ನೌಕರರು ಹಾಗೂ ಅವರ ಕುಟುಂಬ ಸದಸ್ಯರಿಗೆ ನೇರವಾಗಿ ಪ್ರಯೋಜನವಾಗಲಿದೆ. ಅಲ್ಲದೆ, ವೈದ್ಯಕೀಯ ವಿಜ್ಞಾನವು ಈವರೆಗೆ ಮಾನವರಲ್ಲಿ ಕಂಡು ಹಿಡಿದ 2,234 ಕಾಯಿಲೆಗಳಿಗೆ ಸೌಲಭ್ಯ ಸಿಗಲಿದೆ. ಕಾಯಿಲೆಗಳ ವೆಚ್ಚಕ್ಕೆ ಮಿತಿ ಹೇರದೆ ಸಂಪೂರ್ಣ ವೆಚ್ಚ ಭರಿಸುವ ಹಾಗೂ ನಗದು ರಹಿತ ಸೌಲಭ್ಯದ ಯೋಜನೆ ಇದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.