ತುಮಕೂರು: ಎನ್‌ಸಿಐಬಿ (ನ್ಯಾಷನಲ್ ಕ್ರೈಂ ಇನ್ವೆಸ್ಟಿಗೇಶನ್ ಬ್ಯೂರೋ) ಹೆಸರಲ್ಲಿ ನಕಲಿ ಐಡಿ ಕಾರ್ಡ್ ಸೃಷ್ಟಿಸಿಕೊಂಡ ಖತರ್ನಾಕ್ ವಂಚಕನೊಬ್ಬ ಕ್ರೈಂ ಇನ್ಫರ್ಮೇಶನ್ ಆಫೀಸರ್ ಸೋಗಿನಲ್ಲಿ ವ್ಯಾಪಾರಿಗಳನ್ನು ಬೆದರಿಸಿ ಹಣ ದೋಚುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ವಂಚಕನೊಂದಿಗೆ ಕೈ ಜೋಡಿಸಿದ ಮತ್ತೊಬ್ಬನೂ ಎನ್‌ಜಿಒ ಸಾಮಾಜಿಕ ಕಾರ್ಯಕರ್ತನ ಹೆಸರಲ್ಲಿ ಸುಲಿಗೆಗೆ ಇಳಿದಿದ್ದ.
ನಗರದ ಅಶೋಕ ರಸ್ತೆಯಲ್ಲಿರುವ ಟಕೀಲಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಪೋಟೋ ತೆಗೆದು ಸಿಬ್ಬಂದಿಯನ್ನು ಬೆದರಿಸಿ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟು 15 ಸಾವಿರ ಹಣ ದೋಚಿದ್ದ ಆರೋಪಿಗಳೀಗ ನಗರ ಠಾಣೆ ಪೊಲೀಸರ ಅತಿಥಿಗಳಾಗಿದ್ದಾರೆ.
ಗುಬ್ಬಿ ಕುವೆಂಪು ನಗರದ ಕಾರ್ತಿಕ್‌ರಾಜ್(26) ಹಾಗೂ ತುಮಕೂರು ತಾಲೂಕು ಕೆಸ್ತೂರಿನ ಹೇಮಂತ್(25) ಬಂಧಿತರು. ಆರೋಪಿಗಳು ಎನ್‌ಸಿಐಬಿ ಮತ್ತು ಗಂಧದಗುಡಿ ಎಂಬ ಎನ್‌ಜಿಒ ಸಂಸ್ಥೆಗಳ ಹೆಸರಿನಲ್ಲಿ 2 ಗುರುತಿನ ಚೀಟಿ ಇಟ್ಟುಕೊಂಡು ವಿವಿಧೆಡೆ ಬೆದರಿಸಿ ಹಣ ಕೀಳುತ್ತಿದ್ದರು ಎಂದು ವಿಚಾರಣೆ ವೇಳೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಸಿಬಿಐ ಅಂತೆಯೇ ಎನ್‌ಸಿಐಬಿ ಇದೆ. ನಾನು ಅದರ ಉದ್ಯೋಗಿ ಎಂದು ನಕಲಿ ಐಡಿ ಕಾರ್ಡ್ ತೋರಿಸಿ ವ್ಯಾಪಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದರು ಎಂದು ಗೊತ್ತಾಗಿದೆ.