ಕಾರ್ಕಳ: ಕಂಪನಿಗಳ ಸಾಮಾಜಿಕ ಜವಾಬ್ದಾರಿ(ಸಿಎಸ್‌ಆರ್) ಒಂದು ಅಪೂರ್ವ ಪರಿಕಲ್ಪನೆ. ಉದ್ದಿಮೆಗಳು ತಮ್ಮ ಸಹ್ಯ ಬೆಳವಣಿಗೆಗೆ ಸಂಬಂಧಿಸಿ ಸಿಎಸ್‌ಆರ್ ಪರಿಕಲ್ಪನೆಯನ್ನು ಜಾಗತಿಕವಾಗಿ ಜಾರಿಗೊಳಿಸುತ್ತಿದೆ ಎಂದು ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಸೋಶಿಯಲ್ ಪಾಲಿಸಿ ಮತ್ತು ಪ್ರಾಕ್ಟೀಸ್‌ನ ಪ್ರೊ.ಡಾ.ಫೆಮಿದಾ ಹ್ಯಾಂಡಿ ಹೇಳಿದರು.
ನಿಟ್ಟೆ ವಿಶ್ವವಿದ್ಯಾಲಯದ ಜಸ್ಟೀಸ್ ಕೆ.ಎಸ್.ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯಲ್ಲಿ ಸಾರ್ಕ್ ಪ್ರಾಯೋಜಕತ್ವದಲ್ಲಿ ಆಯೋಜಿಸಿದ 9ನೇ ನಿಟ್ಟೆ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿ ಸಿಎಸ್‌ಆರ್ ಪರಿಕಲ್ಪನೆ ಕಾನೂನಾತ್ಮಕವಾಗಿ ಜಾರಿಗೊಂಡರೆ ಅಮೆರಿಕಾದಂತಹ ದೇಶದಲ್ಲಿ ಸಿಎಸ್‌ಆರ್ ಕಾನೂನಾತ್ಮಕವಾಗಿ ಜಾರಿಗೊಳ್ಳಲಿಲ್ಲ. ಈ ವಿಚಾರಗಳಿಗೆ ಸಂಬಂಧಿಸಿ ಸಂಶೋಧನೆಯ ಅಗತ್ಯವಿದೆ ಎಂದರು.
ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಧರ್ಮ ಮತ್ತು ಸೋಶಿಯಲ್ ಪಾಲಿಸಿ ಸಂಶೋಧನೆ ಪ್ರೊ.ಡಾ.ರಾಮ್ ನ್ಯಾನ್ ಮಾತನಾಡಿ, ಸಿಎಸ್‌ಆರ್, ಸಹ್ಯ ಅಭಿವೃದ್ಧಿ ಬಗ್ಗೆ ಸಂಶೋಧನಾ ವ್ಯಾಖ್ಯಾನ ವಿವರಿಸಿ, ಅಭಿವೃದ್ಧಿಗೆ ಸಂಬಂಧಿಸಿದ ವಿಚಾರ ಚಿಂತಿಸಬೇಕು ಎಂದರು.
ನಿಟ್ಟೆ ವಿವಿ ತಾಂತ್ರಿಕ ಶಿಕ್ಷಣದ ಉಪಾಧ್ಯಕ್ಷ ಪ್ರೊ.ಡಾ.ಗೋಪಾಲ ಮುಗೇರಾಯ ಮಾತನಾಡಿ, ಕಂಪನಿ ಜವಾಬ್ದಾರಿಯನ್ನು ನೈತಿಕತೆಯಿಂದ ನಿಭಾಯಿಸಬೇಕು. ಈ ನಿಟ್ಟಿನಲ್ಲಿ ಜನತೆ, ಲಾಭ, ಪರಿಸರವನ್ನು ಕಾಲಕಾಲಕ್ಕೆ ನಿರ್ಣಯ ಮಾಡಬೇಕು ಎಂದರು.
ನಿಟ್ಟೆ ವಿವಿಯ ಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ಡಾ.ಸುಧೀರ್ ಎಂ. ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಡಾ.ಟಿ.ಮಲ್ಲಿಕಾರ್ಜುನಪ್ಪ ಸಮ್ಮೇಳನದ ಆಶಯ ವಿವರಿಸಿದರು. ಕಾರ್ಯದರ್ಶಿ ಪ್ರೊ.ಅರುಣ್ ಡಿಸೋಜ ವಂದಿಸಿದರು. ದೇಶದ ನಾನಾ ಸಂಸ್ಥೆಗಳಿಂದ ಆಗಮಿಸಿದ 160 ಸಂಶೋಧಕರು ಪ್ರಬಂಧ ಮಂಡಿಸಿದರು. ವಂದನಾ ಪ್ರಾರ್ಥಿಸಿದರು. ಪ್ರಾಧ್ಯಾಪಕಿ ಡಾ.ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.