ವಿಜಯವಾಣಿ ಸುದ್ದಿಜಾಲ ಕುಂದಾಪುರ
ಶ್ರೀ ನಾರಾಯಣ ಗುರುಗಳು ಕೇವಲ ಒಂದು ಜನಾಂಗದ ಗುರುವಲ್ಲ, ಮಾನವ ಜನಾಂಗದ ಗುರು. ವಿಶ್ವ ಮಾನವ ಗುರು. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ಮೈಗೂಡಿಸಿಕೊಂಡು ನಮ್ಮಲ್ಲಿ ಅಳವಡಿಸಿಕೊಳ್ಳೋಣ. ಸಾಧ್ಯವಾದಷ್ಟು ಅವರು ಹೇಳಿಕೊಟ್ಟ ಶಾಂತಿ ಪಥದಲ್ಲಿ ನಡೆಯೋಣ. ಆ ದಾರಿಯಲ್ಲಿಯೇ ನಡೆದು ಕೃತರ್ಥರಾಗಲು ಪ್ರಯತ್ನಿಸೋಣ ಎಂದು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಕುಂದಾಪುರ ತಾಲೂಕು ಆಡಳಿತ ವತಿಯಿಂದ ಕುಂದಾಪುರದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಭಾನುವಾರ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಇಡೀ ಜೀವನವನ್ನು ಸಮಾಜದ ಉದ್ಧಾರಕ್ಕಾಗಿ ಮುಡಿಪಾಗಿಟ್ಟವರು. ಕೇರಳ ಸಮಾಜದಲ್ಲಿನ ಅಸ್ಪಶ್ಯತೆ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ ಸಮಾಧಾನಕರವಾದ ಉಪಾಯ ಕಂಡುಕೊಂಡವರು ಶ್ರೀ ನಾರಾಯಣ ಗುರುಗಳು. ಜಗತ್ತಿನಲ್ಲಿರುವುದು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವ ಪ್ರತಿಪಾದಿಸಿದರು. ಕೇರಳದಲ್ಲಿ ಅತಿ ಹೆಚ್ಚು ಸಾಮಾಜಿಕ ಬದಲಾವಣೆ ಮಾಡಿರುವ ವ್ಯಕ್ತಿ ಎಂದರೆ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಅಭಿಪ್ರಾಯಪಟ್ಟರು.
ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಆರ್., ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ, ಕುಂದಾಪುರ ಪುರಸಭೆ ಅಧ್ಯಕ್ಷ ಮೋಹನ್‌ದಾಸ್ ಶೆಣೈ, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ, ಹೆಮ್ಮಾಡಿ ಜನತಾ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ನಾಗರಾಜ್, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ತಾ, ಕುಂದಾಪುರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಇಲಾಖೆ ಅಧಿಕಾರಿಗಳು, ಬಿಲ್ಲವ ಸಮಾಜ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.