ಜಿಲ್ಲೆ

17ರಂದು ನಾರಾಯಣ ಆರ್ಕೇಡ್ ಉದ್ಘಾಟನೆ

Manikya M

ಉಪ್ಪಿನಂಗಡಿ: ಇಲ್ಲಿನ ಜನಪ್ರಿಯ ಆಭರಣ ಮಳಿಗೆ ಅರ್ಧ ಶತಮಾನಗಳಿಂದ ಪರಿಸರದ ನಾಲ್ಕೈದು ತಾಲೂಕುಗಳ ಜನಮಾನಸದಲ್ಲಿ ಮನೆ ಮಾತಾಗಿರುವ ಎಂ.ಎಸ್.ನಾರಾಯಣ ಜುವೆಲರ್ಸ್ ತನ್ನ ಸ್ವರ್ಣ ಮಹೋತ್ಸವ ಆಚರಿಸುತ್ತಿರುವ ಈ ಕಾಲಘಟ್ಟದಲ್ಲಿ ಸ್ಮರಣೀಯವಾಗಿ ಸಂಗಮ ಕ್ಷೇತ್ರವೆನಿಸಿದ ಉಪ್ಪಿನಂಗಡಿಗೆ ಸಮರ್ಪಿಸಲು ಬಯಸಿರುವ ಬಹು ಉಪಯೋಗಿ ವಿಶಾಲ ವಾಣಿಜ್ಯ ಸಂಕೀರ್ಣ ಮಳಿಗೆ ನಾರಾಯಣ ಆರ್ಕೇಡ್ ಉದ್ಘಾಟನೆ ಮಾರ್ಚ್ 17ರಂದು ಸಂಜೆ 5ರಿಂದ ನಡೆಯಲಿದೆ.

ರಾಮಕುಂಜ ಗ್ರಾಮದ ಕೂವೆಚ್ಚಾರು ದಿ.ಎಂ.ಎಸ್.ನಾರಾಯಣ ಅವರು 1975ರಲ್ಲಿ ಉಪ್ಪಿನಂಗಡಿಯಲ್ಲಿ ಎಂ.ಎಸ್.ನಾರಾಯಣ ಜುವೆಲ್ಲರ್ಸ್ ಆರಂಭಿಸಿದರು. ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಕಡಬ ಹೀಗೆ ಹಲವು ತಾಲೂಕುಗಳ ನಗರ, ಗ್ರಾಮೀಣ ಭಾಗದ ಜನರ ನಂಬಿಕೆಯ ಚಿನ್ನಾಭರಣ ವ್ಯಾಪಾರ ಕಟ್ಟೆಯಾಗಿ ಚಿಕ್ಕ ಕೊಠಡಿಯಲ್ಲಿ ವ್ಯಾಪಾರ ನಡೆಸಿದರೂ ದೊಡ್ಡ ಮಟ್ಟದ ಹೆಸರು ಸಂಪಾದಿಸಿ ಜನಾನುರಾಗಿಯಾಗಿದೆ.

ತನ್ನ ಸಂಸ್ಥೆಯ ಸುವರ್ಣ ಮಹೋತ್ಸವ ವರ್ಷದ ನೆನಪಿಗಾಗಿ ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ವಿಶಾಲ ಪ್ರದರ್ಶನ, ಮಾರಾಟ ಮಳಿಗೆ ಆರಂಭಿಸುವ ಕನಸು ಕಂಡವರು ಎಂ.ಎಸ್.ನಾರಾಯಣ ಅವರ ಮಗ ಕೃಷ್ಣ ಎಂ.ಎನ್.ತನ್ನ ತಂದೆಯ ಜತೆ 40 ವರ್ಷಗಳ ವ್ಯಾಪಾರ ಅನುಭವ ಹೊಂದಿರುವವರು. ತೀರ್ಥರೂಪರ ಹೆಸರು ಜನ ಮಾನಸದಲ್ಲಿ ನೆಲೆಸುವಂತಿರಲೆಂದು ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿ ನಾರಾಯಣ ಆರ್ಕೆಡ್ ಎಂಬ ವಾಣಿಜ್ಯ ಸಂಕೀರ್ಣ ಸ್ಥಾಪಿಸಿರುವರು. ಇದು 300 ಆಸನಗಳ ಸಾಮರ್ಥ್ಯವುಳ್ಳ ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಯೋಗ್ಯವಾದ ಹವಾನಿಯಂತ್ರಿತ ಸಭಾಗೃಹ, 14 ಹವಾನಿಯಂತ್ರಿತ ಡಬಲ್ ಬೆಡ್‌ರೂಮ್ ವಸತಿಗೃಹ, ಮಹಡಿ ಮೇಲೇರಲು ಲಿಫ್ಟ್, ತಳ ಅಂತಸ್ತಿನಲ್ಲಿ ವಿಶಾಲ ಪಾರ್ಕಿಂಗ್, ಇನ್ನಿತರ ಸೌಲಭ್ಯಗಳೊಂದಿಗೆ ಉಪ್ಪಿನಂಗಡಿಯಲ್ಲಿ ಪ್ರಪ್ರಥಮ ಬಾರಿಗೆ ನಿರ್ಮಾಣಗೊಂಡಿದೆ. ತನ್ಮೂಲಕ ಪ್ರವಾಸೋದ್ಯಮದ ನೆಲೆಗಟ್ಟಿನಲ್ಲಿ ಅಭಿವೃದ್ಧಿ ಯೋಜನೆಗೆ ಒಳಗಾಗಿರುವ ಉಪ್ಪಿನಂಗಡಿಗೆ ಪೂರಕ ಸೌಲಭ್ಯ ಒದಗಿಸಿದಂತಾಗಿದೆ.

ಎಡನೀರು ಮಠದ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳಿಂದ ಲೋಕಾರ್ಪಣೆಗೊಳ್ಳಲಿರುವ ಈ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುತ್ತೂರು ಜಿ.ಎಲ್.ಆಚಾರ್ಯ ಸಮೂಹ ಸಂಸ್ಥೆಗಳ ಜಿ.ಎಲ್.ಬಲರಾಮ ಆಚಾರ್ಯ ಸಭಾಧ್ಯಕ್ಷತೆ ವಹಿಸಲಿರುವರು. ಪುತ್ತೂರು ವಿಧಾನಸಭಾ ಕ್ಷೇತ್ರ ಮಾನ್ಯ ಶಾಸಕ ಅಶೋಕ ಕುಮಾರ ರೈ ಶ್ರೀ ಕೃಷ್ಣಾವಾಸ್ಯಂ ವಸತಿಗೃಹದ ಉದ್ಘಾಟನೆ ನಡೆಸುವರು. ಉಪ್ಪಿನಂಗಡಿ ಹಿರಿಯ ವೈದ್ಯ ಡಾ.ಕೆ.ಜಿ.ಭಟ್ ಸುಧರ್ಮಾಸಭಾಗೃಹಮ್ ಇದರ ಉದ್ಘಾಟನೆ ಮಾಡಲಿರುವರು.

ಉಪ್ಪಿನಂಗಡಿ ಗ್ರಾಪಂ ಅಧ್ಯಕ್ಷೆ ಲಲಿತಾ, ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ನ್ಯಾಕ್, ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್.ರವಿ, ಉಪ್ಪಿನಂಗಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಭಾಗವಹಿಸಲಿರುವರು. ಶಿಕ್ಷಣ ತಜ್ಞ, ಲೇಖಕ ಟಿ.ನಾರಾಯಣ ಭಟ್ ರಾಮಕುಂಜ ಸಭಾ ನಿರ್ವಹಣೆ ಮಾಡಲಿರುವರು ಎಂದು ಸಂಸ್ಥೆ ಪಾಲುದಾರರಾದ ಸುನಂದಾ ನಾರಾಯಣ, ಕೃಷ್ಣ ಎಂ.ಎನ್., ವಾಣಿ ಕೃಷ್ಣ, ಸುಧನ್ವ ಕೆ.ಎಂ., ಸುಮೇಧ ಕೆ.ಎಂ. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.