ನಂದಿಪುರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಡಾ.ಮಹೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಚರಂತೇಶ್ವರ ಸ್ವಾಮೀಜಿ, ಕನ್ನಡ ಉಪನ್ಯಾಸಕ ಎಚ್.ಎಂ.ಗುರುಬಸವರಾಜ ಇತರರಿದ್ದರು. 
ಜಿಲ್ಲೆ

ಅಭಿವೃದ್ಧಿಯಲ್ಲಿ ಗ್ರಾಮಗಳ ಪಾತ್ರ ಬಹುಮುಖ್ಯ

ಹಗರಿಬೊಮ್ಮನಹಳ್ಳಿ: ತಾಲೂಕಿನ ನಂದಿಪುರದಲ್ಲಿ ಶ್ರೀಗುರು ದೊಡ್ಡ ಬಸವೇಶ್ವರ ಸೇವಾ ಬಳಗದಿಂದ ಹಮ್ಮಿಕೊಂಡಿದ್ದ ‘ ನಮ್ಮ ಊರು ನಮ್ಮ ಹೊಣೆ’ ಸ್ವಚ್ಛತಾ ಅಭಿಯಾನಕ್ಕೆ ಬುಧವಾರ ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.

ಗ್ರಾಮಗಳನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯುವಕರು ಮನಸ್ಸು ಮಾಡಿದರೆ ಗ್ರಾಮಗಳನ್ನು ಸ್ವಚ್ಛವಾಗಿಟ್ಟು ದೇಶಕ್ಕೆ ಮಾದರಿಯಾಗಬಹುದು. ಅಭಿವೃದ್ಧಿಯಲ್ಲಿ ಗ್ರಾಮಗಳ ಪಾತ್ರ ಬಹುಮುಖ್ಯವಾಗಿದೆ. ಉಪನ್ಯಾಸಕ ಎಚ್.ಎಂ.ಗುರುಬಸವರಾಜ ಅವರ ಮಾರ್ಗದರ್ಶನದಲ್ಲಿ ಸ್ವಚ್ಚತಾ ಅಭಿಯಾನ ಆರಂಭವಾಗಿದೆ. ಈ ಗ್ರಾಮದಿಂದ ಆರಂಭವಾದ ಅಭಿಯಾನ ಮುಂದೆ ತಾಲೂಕಿನಾದ್ಯಂತ ನಡೆಯಲಿ. ಯುವಕರು ಗ್ರಾಮಗಳಲ್ಲಿ ಸ್ವಚ್ಛತಾ ಆಂದೋಲನ ನಡೆಸಲಿ ಎಂದು ಡಾ.ಮಹೇಶ್ವರ ಸ್ವಾಮೀಜಿ ಹೇಳಿದರು.

ಇದಕ್ಕೂ ಮುನ್ನ ದೀಪಾವಳಿ ಹಬ್ಬದ ಪಾಡ್ಯ ಪ್ರಯುಕ್ತ ಗೋಮಾತೆಗೆ ಪೂಜೆ ನೆರವೇರಿಸಲಾಯಿತು. ಗದ್ದಿಕೆರೆ ಮಠದ ಚರಂತೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕ ಎಚ್.ಎಂ.ಗುರುಬಸವರಾಜ, ಗ್ರಾಪಂ ಮಾಜಿ ಅಧ್ಯಕ್ಷ ಯಮುನಪ್ಪ, ನಂದಿಪುರದ ಯುವಕರು, ಗ್ರಾಮದ ದೈವಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.