ಕಾರ್ಕಳ: ಸಿರಿ ಕ್ಷೇತ್ರಗಳ ತವರೂರು ಎಂಬ ಇತಿಹಾಸ ಪ್ರಸಿದ್ಧಿ ಪಡೆದ ನಾಲ್ಕುಸ್ಥಾನ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಂಭ್ರಮದಲ್ಲಿ ನಂದಳಿಕೆ ಅಯನೋತ್ಸವ ಸಿರಿ ಜಾತ್ರೆ ಏ.12ರಂದು ಜರುಗಲಿದೆ. ಜಾತ್ರೆಗಾಗಿ ಸಕಲ ವ್ಯವಸ್ಥೆಗಳು ಸಿದ್ಧಗೊಂಡಿದ್ದು ಈ ಭಾರಿ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆಯಿದೆ ಎಂದು ನಂದಳಿಕೆ ಚಾವಡಿ ಅರಮನೆ ಎನ್.ಸುಹಾಸ್ ಹೆಗ್ಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಮಂಗಳವಾರ ಬೆಳಗ್ಗೆ 10ರಿಂದ ಕೆದಿಂಜೆ ಮೂಲಸ್ಥಾನ ಮುಜಲೊಟ್ಟು ಶ್ರೀ ಅಬ್ಬಗ ದಾರಗ ಸಾನ್ನಿಧ್ಯದಲ್ಲಿ ಶ್ರೀ ಕುಮಾರ ಅಬ್ಬಗ ದಾರಗ ದರ್ಶನ, 9ರಂದು ರಾತ್ರಿ 9 ಗಂಟೆಗೆ ಧ್ವಜಾರೋಹಣ, ಮಹಾರಂಗಪೂಜೆ, ಉತ್ಸವ ಬಲಿ ಜರುಗಲಿದೆ. 10ರಂದು ಮಧ್ಯಾಹ್ನ 1ರಿಂದ ಕೆದಿಂಜೆ ಮೂಲಸ್ಥಾನ ಮುಜಲೊಟ್ಟು ಶ್ರೀ ಉರಿಬ್ರಹ್ಮ ಸನ್ನಿಧಿಯಿಂದ ಹಸಿರುವಾಣಿ ಹೊರಕಾಣಿಕೆಗಳ ಮಹಾ ಮೆರವಣಿಗೆ ನಡೆಯಲಿದೆ. 11ರಂದು ಅಂಬೋಡಿ ಜಾತ್ರೆ ಹಾಗೂ 12ರಂದು ಸಿರಿ ಜಾತ್ರೆ ಜರುಗಲಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಕೇರಳ ಸೇರಿದಂತೆ ರಾಜ್ಯದ ನಾನಾ ಭಾಗದ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ. ಜಾತ್ರೆಯ ಅಚ್ಚುಕಟ್ಟಿನ ವ್ಯವಸ್ಥೆಗಾಗಿ 1500ಕ್ಕೂ ಅಧಿಕ ಸ್ವಯಂ ಸೇವಕರ ತಂಡ ಸಿದ್ಧವಾಗಿದೆ ಎಂದರು.
ಭಿಕ್ಷಾಟನೆ ನಿಷೇಧ: ಇತ್ತೀಚಿನ ದಿನಗಳಲ್ಲಿ ಜಾತ್ರೆ ಸಂದರ್ಭದಲ್ಲಿ ಹಾಗೂ ಸಮಾರಂಭಗಳಲ್ಲಿ ಅಲ್ಲಲ್ಲಿ ಭಿಕ್ಷಾಟನೆ ಹಾಗೂ ಆರ್ಥಿಕ ಸಹಾಯ ನೀಡುವಂತೆ ವಿನಂತಿಸುವವರ ಸಂಖ್ಯೆ ಮತ್ತು ಮಂಗಳಮುಖಿಯರಿಂದಲೂ ಭಿಕ್ಷಾಟನೆ ಹೆಚ್ಚಾಗುತ್ತಿದ್ದು ಕ್ಷೇತ್ರಕ್ಕೆ ಬರುವ ಭಕ್ತರಿಗೆ ಇದರಿಂದ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಕ್ಷೇತ್ರದ ಆಸುಪಾಸುಗಳಲ್ಲಿ ಭಿಕ್ಷಾಟನೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ವ್ಯವಸ್ಥಾಪಕ ಪಿ.ರವಿರಾಜ್ ಭಟ್ ಉಪಸ್ಥಿತರಿದ್ದರು.