ಜಿಲ್ಲೆ

26ರಂದು ಕಳಂಜ ನಂದಗೋಕುಲದಲ್ಲಿ ದೀಪೋತ್ಸವ : ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾಹಿತಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕಳಂಜ ನಂದಗೋಕುಲ ಗೋಶಾಲೆಯಲ್ಲಿ ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿ, ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ವತಿಯಿಂದ ಮೇ 26ರಂದು, ನಂದಗೋಕುಲ ದೀಪೋತ್ಸವ, ಗೋಮಾತೆಗೆ ಕೋಟಿ ನಮನ ಕಾರ್ಯಕ್ರಮ, ದೀಪೋತ್ಸವ ನಡೆಯಲಿದೆ. ಆ ಪ್ರಯುಕ್ತ ಮೇ 19ರಂದು ಗೋಗ್ರಾಸ ಹೊರೆಕಾಣಿಕೆ ಅರ್ಪಣೆ ನಡೆಯಲಿದೆ ಎಂದು ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಗೋರಕ್ಷಣೆಗಾಗಿ ಕಳಂಜದಲ್ಲಿ ಪ್ರಾರಂಭವಾದ ಟ್ರಸ್ಟ್ ಮತ್ತು ಗೋಶಾಲೆ ದಾನಿಗಳ ಸಹಕಾರದಿಂದ ಮುನ್ನಡೆಯುತ್ತಿದೆ. ಮೇ 26ರಂದು ಗೋವುಗಳಿಗೆ ಸಾಮೂಹಿಕ ಪೂಜೆ, ಗೋನಂದಾರತಿ ಮತ್ತು ದೀಪೋತ್ಸವ ನಡೆಯಲಿದೆ. ಪುಣ್ಯಕೋಟಿಗೆ ಒಂದು ಕೋಟಿ ರೂ. ನೆರವು ನೀಡುವ ಯೋಜನೆಯನ್ನು ಗೌರವಾಧ್ಯಕ್ಷ ಶಶಿಧರ್ ಶೆಟ್ಟಿ ನವಶಕ್ತಿ ಗೌರವಾಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕಿನ ಪ್ರತಿಮನೆಯಿಂದ ಗೋಗ್ರಾಸ ಸಂಗ್ರಹ ಹಾಗೂ ದಾನಿಗಳ ಸಹಕಾರದಿಂದ ಪುಣ್ಯ ಕಾರ್ಯ ನಡೆಯಲಿದೆ. ಕಸಾಯಿ ಖಾನೆಗಳಿಗೆ ಹೋಗುವ ಹೋರಿ, ದನ, ಕರುಗಳ ರಕ್ಷಣೆ ಮಾಡುತ್ತ್ತಾ ಬಂದಿರುವ ನಂದಗೋಕುಲ ಗೋಶಾಲೆ, ಸುಮಾರು 280 ಗೋವುಗಳನ್ನು ಸಾಕುತ್ತಿದ್ದು ತಿಂಗಳಿಗೆ 3,50,000 ಲಕ್ಷ ರೂ. ಖರ್ಚು ಬರುತ್ತಿದೆ. ಇಲ್ಲಿವರೆಗೆ ಉತ್ತಮ ರೀತಿಯಲ್ಲಿ ಗೋಶಾಲೆ ನಡೆಯುತ್ತಿದೆ. ಆದರೂ ಒಂದಷ್ಟು ಹೆಚ್ಚಿನ ಹೊರೆ ಇರುವ ಕಾರಣ ತಾಲೂಕಿನ ಗೋಪ್ರೇಮಿಗಳು ಸಹಾಯಹಸ್ತ ನೀಡಬೇಕಾಗಿದೆ ಎಂದರು.

ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಪಂಚಶ್ರೀ ಉಪಸ್ಥಿತರಿದ್ದರು.

241 ಬೂತ್‌ಗಳಿಗೆ ಆಮಂತ್ರಣ

ಸಂಚಾಲನಾ ಸಮಿತಿ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಮಾರ್ಗದರ್ಶನ ಮತ್ತು ಸಲಹೆಯಂತೆ, ತಾಲೂಕಿನ ಎಲ್ಲ್ಲ ಗ್ರಾಮಗಳ 241 ಬೂತ್‌ಗಳಿಗೆ ಕಾರ್ಯಕ್ರಮದ ಆಮಂತ್ರಣ ತಲುಪಿಸಲಾಗುತ್ತದೆ. ಹೊರೆಕಾಣಿಕೆ ಬೃಹತ್ ಶೋಭಾಯಾತ್ರೆ ಬೆಳ್ತಂಗಡಿ ಎಪಿಎಂಸಿ ವಠಾರದಿಂದ ಪ್ರಾರಂಭವಾಗುತ್ತದೆ, ಹಸಿ ಹುಲ್ಲು, ಒಣಹುಲ್ಲು, ಪಶು ಆಹಾರ, ಕೃಷಿ ಉತ್ಪನ್ನಗಳಾದ ಅಡಕೆ, ತೆಂಗಿನಕಾಯಿ, ಅಕ್ಕಿ ಇತ್ಯಾದಿಗಳನ್ನು ಹೊರೆಕಾಣಿಕೆಯಲ್ಲಿ ಸಮರ್ಪಣೆ ಮಾಡಿ ಸಹಕಾರ ನೀಡಬೇಕು ಎಂದು ನಂದಗೋಕುಲ ದೀಪೋತ್ಸವ ಸಂಚಾಲನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಹೇಳಿದರು.