ಬೆಂಗಳೂರು: ಬಸ್, ಆಟೋ, ಟ್ಯಾಕ್ಸಿ ಎಲ್ಲ ಸೇವೆಗಳೂ ಇಂದಿನಿಂದ ಆರಂಭಗೊಂಡಿದ್ದು, ಮೆಟ್ರೊ ಯಾವಾಗ ಆರಂಭಗೊಳ್ಳಲಿದೆ ಎಂಬ ಬಗ್ಗೆ ಲಕ್ಷಾಂತರ ಪ್ರಯಾಣಿಕರು ಕಾತರದಿಂದ ಕಾಯುತ್ತಿದ್ದಾರೆ.
ಸ್ವಂತ ವಾಹನ, ಬಿಎಂಟಿಸಿ ಬಸ್ ಏನೇ ಇದ್ದರೂ ದಿನನಿತ್ಯವೂ ಬೆಂಗಳೂರಿನಲ್ಲಿ ಲಕ್ಷಾಂತರ ಮಂದಿ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಮೆಟ್ರೊ ಸೇವೆಯನ್ನೇ ಅವಲಂಬಿಸಿದ್ದಾರೆ. ಅದರಲ್ಲಿಯೂ ವೀಕೆಂಡ್ಗಳಲ್ಲಿ ಮೆಟ್ರೊದಲ್ಲಿ ನೂಕು ನುಗ್ಗಲು.
ಇದನ್ನೂ ಓದಿ: ಇದು ಫೋನ್ಇನ್ ಅಲ್ಲ, ಫೋನ್ಔಟ್!
ಆದ್ದರಿಂದ ಮೆಟ್ರೊ ಸಂಚಾರ ಯಾವಾಗ ಆರಂಭ ಆಗಲಿದೆ ಎಂಬ ಬಗ್ಗೆ ಚಾತಕ ಪಕ್ಷಿಯಂತೆ ಎಲ್ಲರೂ ಕಾಯುತ್ತಿದ್ದಾರೆ. ಅದರಲ್ಲಿಯೂ ಈಗ ಲಾಕ್ಡೌನ್ ಸಡಿಲಿಕೆ ಆದನಂತರ ಹಲವಾರು ಕಚೇರಿಗಳು ತನ್ನ ಸಿಬ್ಬಂದಿಯನ್ನು ಆಫೀಸಿಗೆ ಕರೆದಿರುವ ಹಿನ್ನೆಲೆಯಲ್ಲಿ ಮೆಟ್ರೊಗೆ ತುಂಬಾ ಡಿಮಾಂಡ್ ಕೂಡ ಬಂದಿದೆ.
ಆದರೆ ಈ ಪ್ರಯಾಣಿಕರಿಗೆ ಸದ್ಯ ಮೆಟ್ರೊ ಸಂಚಾರದ ಭಾಗ್ಯ ಇಲ್ಲ. ಏಕೆಂದರೆ, ಮೇ 31ರವರೆಗೆ ನಮ್ಮ ಮೆಟ್ರೊ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ಪ್ರಕಟಣೆ ತಿಳಿಸಿದೆ.
ಕರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ಸ್ಥಗಿತಗೊಂಡಿರುವ ಮೆಟ್ರೊ ಸಂಚಾರವನ್ನು ಮೇ 31ರವರೆಗೆ ಮುಂದುವರಿಸಲಾಗಿದೆ. ಆ ನಂತರ ಸಂಚಾರ ಆರಂಭ ಮಾಡಬೇಕೋ, ಬೇಡವೋ ಎಂಬುದಾಗಿ ನಿರ್ಧರಿಸಲಾಗುವುದು. ಅಂತಿಮ ನಿರ್ಧಾರಕ್ಕೆ ಬರುವವರೆಗೂ ಸಂಚಾರ ನಿಲ್ಲಿಸಲಾಗಿದೆ ಎಂದು ನಿಗಮವು ಹೇಳಿದೆ.
ಮೆಟ್ರೊ ರೈಲನ್ನು ತಿಂಗಳುಗಟ್ಟಲೆ ಹಾಗೆಯೇ ನಿಲ್ಲಿಸದೇ ಇಟ್ಟಲ್ಲಿ, ಅದರ ಇಂಜಿನ್ಗಳು ಹಾಳಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಪರೀಕ್ಷಾರ್ಥವಾಗಿ ಸಂಚಾರ ಮಾತ್ರ ಕೈಗೊಳ್ಳಲಾಗುವುದು. ಇದರಲ್ಲಿ ಪರೀಕ್ಷಕರು ಮಾತ್ರ ಸಂಚಾರ ಮಾಡಲಿದ್ದಾರೆಯೇ ವಿನಾ ಇದು ಸಾರ್ವಜನಿಕರಿಗೆ ಅಲ್ಲ ಎಂದೂ ನಿಗಮ ಸ್ಪಷ್ಟಪಡಿಸಿದೆ.