ಜಿಲ್ಲೆ

ವರ್ಷಾಂತ್ಯಕ್ಕೆ ಹಳದಿ ಮಾರ್ಗದಲ್ಲಿ ನಮ್ಮ ಮೆಟ್ರೋ ಸಂಚಾರ!

ರಾಮ್​ಕಿಶನ್
​ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸೇವೆ ಜನಪ್ರಿಯತೆ ಪಡೆದುಕೊಂಡಿದ್ದು, ಇನ್ನಷ್ಟು ಪ್ರದೇಶಗಳಿಗೆ ವಿಸ್ತರಣೆಯಾಗಲಿದೆ. ಈ ನಿಟ್ಟಿನಲ್ಲಿ ಹಾಲಿ ಕಾರ್ಯಾಚರಣೆಯಲ್ಲಿರುವ ನೇರಳೆ ಹಾಗೂ ಹಸಿರು ಮಾರ್ಗಕ್ಕೆ ಹೊಸದಾಗಿ ಹಳದಿ ಮಾರ್ಗ ವರ್ಷಾಂತ್ಯಕ್ಕೆ ಸೇರ್ಪಡೆಯಾಗಲಿದೆ.

ಬಿಎಂಆರ್​ಸಿಎಲ್​ನ ಈ ಉಪಕ್ರಮದಿಂದಾಗಿ ಮೆಟ್ರೋ ಪ್ರಯಾಣಿಕರಿಗೆ ಇನ್ನಷ್ಟು ಸ್ಥಳಗಳಿಗೆ ತೆರಳಲು ಅವಕಾಶ ಸಿಗಲಿದೆ. ಮುಖ್ಯವಾಗಿ ಸಂಚಾರ ದಟ್ಟಣೆಯಲ್ಲಿ ಸಿಲುಕದೆ ಕಡಿಮೆ ಅವಧಿಯಲ್ಲಿ ಗಮ್ಯ ತಲುಪುವುದರಿಂದ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚುವ ಸಾಧ್ಯತೆ ಇದೆ. ಇದನ್ನು ಗಮನಿಸಿಯೇ ಸರ್ಕಾರ ನಮ್ಮ ಮೆಟ್ರೋಗೆ ಆದ್ಯತೆ ನೀಡಿದೆ.

ಹೊಸ ಹಳದಿ ಮಾರ್ಗ ಆರ್​.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ 19.1 ಕಿ.ಮೀ. ಉದ್ದದ ಮೆಟ್ರೋ ರೈಲು ಸೇವೆ ಡಿಸೆಂಬರ್​ಗೆ ಲಭ್ಯವಾಗಲಿದ್ದು, ಸಿದ್ಧತಾ ಕೆಲಸಗಳು ವೇಗ ಪಡೆದುಕೊಂಡಿವೆ. ಈಗಾಗಲೇ ಸಿವಿಲ್​ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದೆ. ಸಿಗ್ನಲಿಂಗ್​ ಕೆಲಸಗಳು ಮುಗಿಯುತ್ತಿದ್ದಂತೆ, ದೆಹಲಿಯಿಂದ ಮೆಟ್ರೋ ರೈಲ್ವೇ ಸುರಕ್ಷತಾ ಆಯೋಗದ ಪ್ರಮುಖರು ಆಗಮಿಸಿ ನಿಲ್ದಾಣದಲ್ಲಿ ಸುರಕ್ಷತೆ, ಸಿಗ್ನಲಿಂಗ್​, ಟ್ರ್ಯಾಕ್​ ಮುಂತಾದ ವ್ಯವಸ್ಥೆಗಳ ಕುರಿತು ತಪಾಸಣೆ ನಡೆಸಲಿದ್ದಾರೆ. ಮುಂದಿನ ಅಕ್ಟೋಬರ್​-ನವೆಂಬರ್​ನಲ್ಲಿ ಪ್ರಾಯೋಗಿಕ ಸಂಚಾರ ನಡೆಸಲು ಬಿಎಂಆರ್​ಸಿಎಲ್​ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ಪ್ರಮಾಣಪತ್ರ ದೊರೆತೊಡನೆ ಅಧಿಕೃತವಾಗಿ ಸಂಚಾರವನ್ನು ಆರಂಭಿಸಲಾಗುತ್ತದೆ.

ವಿಸ್ತರಿತ ಮಾರ್ಗವೂ ಸೇವೆಗೆ ಮುಕ್ತ

ನಾಗಸಂದ್ರ-ಮಾದಾವರ ಹಸಿರು ಮಾರ್ಗದ ಕಾಮಗಾರಿ 2017ರಲ್ಲಿ ಪ್ರಾರಂಭವಾಗಿತ್ತು. ಭೂಸ್ವಾಧಿನ ಹಾಗೂ ಇತರ ಅಡೆತಡೆಗಳಿಂದ ಕಾಮಗಾರಿ ವಿಳಂಬವಾಗಿತ್ತು. ಮೂರು ಕಿ.ಮೀ. ದೂರದ ವಿಸ್ತರಿತ ಮಾರ್ಗವು ಮಂಜುನಾಥನಗರ, ಚಿಕ್ಕಬಿದರಕಲ್ಲು ಮತ್ತು ಮಾದಾವರ ನಿಲ್ದಾಣಗಳನ್ನು ಒಳಗೊಂಡಿದೆ. ಜತೆಗೆ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (ಬಿಐಇಸಿ) ಸಂಪರ್ಕಿಸುತ್ತದೆ. ಈ ಮಾರ್ಗದಲ್ಲಿ ಸಂಚಾರ ಆರಂಭವಾಗುತ್ತಿದ್ದಂತೆ ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳನ್ನು ಸಂಪರ್ಕಿಸುವ ಬೆಂಗಳೂರಿನ ಮೊದಲ ಮೆಟ್ರೋ ಮಾರ್ಗ ಇದಾಗಿರಲಿದೆ.

ನಾಗಸಂದ್ರ&ಮಾದಾವರ ವಿಸ್ತರಿತ ಮಾರ್ಗ ಹಾಗೂ ಆರ್​.ವಿ.ರಸ್ತೆ&ಬೊಮ್ಮಸಂದ್ರ ಹೊಸ ಮಾರ್ಗದ ಸಿವಿಲ್​ ಕೆಲಸಗಳು ಬಹುತೇಕ ಪೂರ್ಣಗೊಂಡಿದೆ. ಸದ್ಯದಲ್ಲೇ ದೆಹಲಿಯಿಂದ ಮೆಟ್ರೋ ರೈಲ್ವೇ ಸುರಕ್ಷತಾ ಆಯೋಗದ ಪ್ರಮುಖರು ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ. ಡಿಸೆಂಬರ್​ನಲ್ಲಿ ಈ ಮಾರ್ಗಗಳನ್ನು ಸಂಚಾರಕ್ಕೆ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಅಂಜುಮ್​ ಪರ್ವೇಜ್​ ಪ್ರತಿಕ್ರಿಯಿಸಿದ್ದಾರೆ.

ಹಳದಿ ಮಾರ್ಗದ ಮುಖ್ಯಾಂಶ

  • ಯೋಜನಾ ವೆಚ್ಚ: ಅಂದಾಜು 798 ಕೋಟಿ ರೂ.
  • ಮಾರ್ಗದ ಒಟ್ಟು ಉದ್ದ: 19.1 ಕಿ.ಮೀ.

ಒಟ್ಟು ನಿಲ್ದಾಣಗಳು

ರಾಷ್ಟ್ರೀಯ ವಿದ್ಯಾಲಯ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಬಡಾವಣೆ, ಸೆಂಟ್ರಲ್​ ಸಿಲ್ಕ್​ ಬೋರ್ಡ್​, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲು ಗೇಟ್​, ಸಿಂಗಸಂದ್ರ, ಹೊಸ ರಸ್ತೆ, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್​ ಸಿಟಿ, ಹುಸ್ಕೂರು ರಸ್ತೆ, ಹೆಬ್ಬಗೋಡಿ, ಬೊಮ್ಮಸಂದ್ರ.

ಮಾರ್ಗದ ವಿಶೇಷತೆ

ಇಂಟರ್​ ಜಂಕ್ಷನ್​ ಸೌಲಭ್ಯದಿಂದಾಗಿ ಆರ್​.ವಿ.ರಸ್ತೆ&ಬೊಮ್ಮಸಂದ್ರ ಹಳದಿ ಮಾರ್ಗವು ಪಿಂಕ್​ ಮಾರ್ಗದ ಜಯದೇವ ಆಸ್ಪತ್ರೆ ನಿಲ್ದಾಣ ಹಾಗೂ ನೀಲಿ ಮಾರ್ಗದಲ್ಲಿ ಸೆಂಟ್ರಲ್​ ಸಿಲ್ಕ್​ ಬೋರ್ಡ್​ ನಿಲ್ದಾಣವನ್ನು ಸಂಪರ್ಕಿಸುತ್ತದೆ.