ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ 
ಮೈಸೂರು

ದಸರಾದಲ್ಲಿ ಅಧಿಕಾರಿಗಳ ದುರ್ವರ್ತನೆಗೆ ರಾಜವಂಶಸ್ಥೆ ಪ್ರಮೋದಾದೇವಿ ಆಕ್ರೋಶ: ಹೈಕೋರ್ಟ್ ಮೊರೆ ಹೋಗುವ ಎಚ್ಚರಿಕೆ! Pramoda Devi Wadiyar

ದಸರಾ ಆಚರಣೆಯ ವೇಳೆ ಅರಮನೆ ಆವರಣದಲ್ಲಿ ನಡೆದಿವೆ ಎನ್ನಲಾದ ಹಲವು ಭದ್ರತಾ ಲೋಪಗಳು ಹಾಗೂ ಅಧಿಕಾರಿಗಳ ಅನಗತ್ಯ ಹಸ್ತಕ್ಷೇಪದ ವಿರುದ್ಧ ಕಿಡಿಕಾರಿರುವ ಪ್ರಮೋದಾದೇವಿ, ಮುಂದಿನ ದಿನಗಳಲ್ಲಿ ಈ ರೀತಿಯ ಅಡಚಣೆಗಳು ಮುಂದುವರಿದರೆ ನ್ಯಾಯಾಲಯದ ಬಾಗಿಲು ತಟ್ಟುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ವಿಶ್ವವಿಖ್ಯಾತ ದಸರಾ ಮಹೋತ್ಸವದ (Mysuru Dasara) ವೇಳೆ ವಿವಿಧ ಸರ್ಕಾರಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆ, ಪೊಲೀಸರ ಅಶಿಸ್ತಿನ ವರ್ತನೆ ಹಾಗೂ ಅರಮನೆಯ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳಿಗೆ ಉಂಟಾಗಿರುವ ಅಡಚಣೆಗಳ ವಿರುದ್ಧ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ( Pramoda Devi Wadiyar ) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಸರಾ ಆಚರಣೆಯ ವೇಳೆ ಅರಮನೆ ಆವರಣದಲ್ಲಿ ನಡೆದಿವೆ ಎನ್ನಲಾದ ಹಲವು ಭದ್ರತಾ ಲೋಪಗಳು ಹಾಗೂ ಅಧಿಕಾರಿಗಳ ಅನಗತ್ಯ ಹಸ್ತಕ್ಷೇಪದ ವಿರುದ್ಧ ಕಿಡಿಕಾರಿರುವ ಪ್ರಮೋದಾದೇವಿ, ಮುಂದಿನ ದಿನಗಳಲ್ಲಿ ಈ ರೀತಿಯ ಅಡಚಣೆಗಳು ಮುಂದುವರಿದರೆ ನ್ಯಾಯಾಲಯದ ಬಾಗಿಲು ತಟ್ಟುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿಯ ಭದ್ರತಾ ನಿಯಮಗಳನ್ನು ಪೊಲೀಸರೇ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ಪ್ರಮೋದಾದೇವಿ ಆರೋಪಿಸಿದ್ದಾರೆ. ಅಂಬಾರಿ ಸುತ್ತಮುತ್ತ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸೆಲ್ಫಿ ಹಾಗೂ ಫೋಟೋ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದು ಅವರ ಅಶಿಸ್ತು ಮತ್ತು ಕರ್ತವ್ಯಲೋಪವನ್ನು ಎತ್ತಿಹಿಡಿಯುತ್ತದೆ. ಅಷ್ಟೇ ಅಲ್ಲದೆ, ವಿವಿಧ ಸರ್ಕಾರಿ ಇಲಾಖೆಗಳ ಅನಧಿಕೃತ ವ್ಯಕ್ತಿಗಳು ಅಂಬಾರಿಯ ತೀರಾ ಹತ್ತಿರದಲ್ಲಿ ಓಡಾಡಿದ್ದು, ಇದು ನಗರ ಪೊಲೀಸ್ ಆಯುಕ್ತರು ನೀಡಿದ್ದ ಭದ್ರತೆಯ ಭರವಸೆಗೆ ತದ್ವಿರುದ್ಧವಾಗಿದೆ. ಚಿನ್ನದ ಅಂಬಾರಿಯು ಸರ್ಕಾರದ ಆಸ್ತಿಯಲ್ಲ, ಅದು ರಾಜಮನೆತನದ ಖಾಸಗಿ ಸ್ವತ್ತು ಎಂಬುದನ್ನು ಪ್ರತಿಯೊಬ್ಬರೂ ನೆನಪಿಡಬೇಕು ಎಂದು ಪ್ರಮೋದಾದೇವಿ ಅವರು ಖಡಕ್ ಆಗಿ ನೆನಪಿಸಿದ್ದಾರೆ.

ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಯ ಸಮಯದಲ್ಲಿ ರಾಜಮನೆತನವನ್ನು ಪ್ರತಿನಿಧಿಸುವ ಸಿಬ್ಬಂದಿ ಮತ್ತು ಪ್ರತಿನಿಧಿಗಳೊಂದಿಗೆ ಪೊಲೀಸರು ಹಾಗೂ ಡಿಸಿಪಿ ಮಟ್ಟದ ಅಧಿಕಾರಿಗಳು ತಳ್ಳಾಟ ನಡೆಸಿ, ಹಲ್ಲೆ ಮಾಡುವ ರೀತಿಯಲ್ಲಿ ದುರ್ವರ್ತನೆ ತೋರಿದ್ದಾರೆ ಎಂದು ಪ್ರಮೋದಾದೇವಿ ಅವರು ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿಯ ನಡುವೆ ಪರಸ್ಪರ ಸಮನ್ವಯದ ಕೊರತೆ ಪ್ರತಿ ವರ್ಷವೂ ಎದ್ದು ಕಾಣುತ್ತಿದ್ದು, ಇದು ರಾಜಮನೆತನದ ಗೌರವಕ್ಕೆ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳಿಗೆ ಧಕ್ಕೆ ತರುತ್ತಿದೆ. ಅರಮನೆ ಆವರಣದಲ್ಲಿ ಅನಗತ್ಯವಾಗಿ ಬ್ಯಾರಿಕೇಡ್‌ಗಳನ್ನು ಅಳವಡಿಸುವುದರಿಂದ ನಿತ್ಯದ ಧಾರ್ಮಿಕ ಆಚರಣೆಗಳಿಗೆ ತೀವ್ರ ಅಡ್ಡಿಯುಂಟಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಜ್ರಮುಷ್ಠಿ ಕಾಳಗದ ಕುರಿತ ತಪ್ಪು ವರದಿಗಳಿಗೆ ಸ್ಪಷ್ಟನೆ

ಈ ಬಾರಿಯ ದಸರಾದಲ್ಲಿ ವಜ್ರಮುಷ್ಠಿ ಕಾಳಗ ರದ್ದಾಗಿರುವ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಮೋದಾದೇವಿ, ಇತಿಹಾಸದಲ್ಲೇ ಮೊದಲ ಬಾರಿಗೆ ವಜ್ರಮುಷ್ಠಿ ಕಾಳಗ ಸ್ಥಗಿತಗೊಳಿಸಲಾಗಿದೆ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾದವು ಎಂದು ತಿಳಿಸಿದ್ದಾರೆ. ಈ ಹಿಂದೆಯೂ ಅಂದರೆ 1970 ಮತ್ತು 1980ರ ದಶಕಗಳಲ್ಲಿ ವಿಭಿನ್ನ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣಗಳಿಂದಾಗಿ ವಜ್ರಮುಷ್ಠಿ ಕಾಳಗ ನಡೆದಿರಲಿಲ್ಲ. ಹೀಗಾಗಿ ಇದು ಮೊದಲ ಬಾರಿಗೆ ರದ್ದಾಗಿದೆ ಎಂದು ಬಿಂಬಿಸುವುದು ತಪ್ಪು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೈಕೋರ್ಟ್‌ಗೆ ಮೊರೆ ಹೋಗುವ ಎಚ್ಚರಿಕೆ

ಕಳೆದ 45 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಂಬೂಸವಾರಿಯಲ್ಲಿ ಅಂಬಾರಿ ಹೊರಲಿರುವ ಪ್ರಮುಖ ಆನೆಯ ಹೆಸರನ್ನು ಕೊನೆಯ ಕ್ಷಣದವರೆಗೂ ರಾಜಮನೆತನಕ್ಕೆ ತಿಳಿಸದೆ ಗೌಪ್ಯವಾಗಿಡಲಾಗಿತ್ತು ಎಂಬ ವಿಚಿತ್ರ ಸಂಗತಿಯನ್ನು ಅವರು ಬಹಿರಂಗಪಡಿಸಿದ್ದಾರೆ.

ಅರಮನೆಯ ಸಾಂಪ್ರದಾಯಿಕ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಸರ್ಕಾರಿ ಇಲಾಖೆಗಳು ಅಥವಾ ಪೊಲೀಸರು ಅಡ್ಡಿಪಡಿಸಿದರೆ, ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಲು ರಾಜಮನೆತನಕ್ಕೆ ಸಂಪೂರ್ಣ ಸ್ವತಂತ್ರವಿದೆ ಎಂದು ನ್ಯಾಯಾಲಯದ ಆದೇಶದಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ಇನ್ಮುಂದೆಯಾದರೂ ಆಡಳಿತ ಯಂತ್ರ ಎಚ್ಚೆತ್ತುಕೊಂಡು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಪ್ರಮೋದಾದೇವಿ ಒಡೆಯರ್ ಆಗ್ರಹಿಸಿದ್ದಾರೆ.