ಮೈಸೂರು: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದಿರುವ ಘಟನೆ ತಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದಲ್ಲಿ ನಡೆದಿದೆ.
ವಾಟಾಳು ಗ್ರಾಮದ ನಿವಾಸಿ ಕುಮಾರ್ ಆರೋಪಿ. ಅದೇ ಗ್ರಾಮದ ಸಿಪಾಯಿ ಗಾಯಗೊಂಡವರು. ಕುಮಾರ್ ಪತ್ನಿಯ ಜತೆ ಸಿಪಾಯಿ ಅಕ್ರಮ ಸಂಬಂಧ ಹೊಂದಿದ್ದಾನೆಂಬ ಗುಸುಗುಸು ಊರಿನಲ್ಲಿ ಕೇಳಿಬಂದಿತ್ತು. ಇದರಿಂದ ಕುಪಿತಗೊಂಡ ಕುಮಾರ್, ಸಿಪಾಯಿ ಮೇಲೆ ಹಲ್ಲೆಗೆ ಮುಂದಾಗಿ ಚಾಕು ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಸಿಪಾಯಿಯನ್ನು ಸ್ಥಳೀಯರು ತಕ್ಷಣ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಿಪಾಯಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಘಟನೆ ಬೆನ್ನಲ್ಲೇ ಕುಮಾರ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಘಟನಾ ಸ್ಥಳಕ್ಕೆ ತಿ. ನರಸೀಪುರ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)