ಜಿಲ್ಲೆ

ಸ್ವಚ್ಛ ಸರ್ವೇಕ್ಷಣ, ರಾಜ್ಯಕ್ಕೆ ಪ್ರಶಸ್ತಿಗಳ ಗರಿ; ಮೈಸೂರು ನಗರಕ್ಕೆ 4 ಪುರಸ್ಕಾರ

Webdesk - Ravikanth

ನವದೆಹಲಿ: ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೀಡುವ ಸ್ವಚ್ಛ ಸರ್ವೇಕ್ಷಣಾ -2021 ಸ್ಪರ್ಧೆಯ ವಿವಿಧ ಪ್ರಶಸ್ತಿಗಳು ಕರ್ನಾಟಕದ ಮುಡಿಗೇರಿದ ಹಿನ್ನೆಲೆಯಲ್ಲಿ ರಾಜ್ಯ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರು ಶನಿವಾರ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ, ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ, ರಾಜ್ಯ ಸಚಿವ ಕೌಶಲ್ ಕಿಶೋರ್ ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕಸಮುಕ್ತ ನಗರ ವರ್ಗದ ಅಡಿಯಲ್ಲಿ ಮೈಸೂರು ನಗರ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ದೇಶದ 4360 ನಗರಗಳ ಸ್ಥಿತಿಗತಿಯನ್ನು ಅಳೆಯಲು ಹಲವು ಮಾನದಂಡಗಳನ್ನು ಕೇಂದ್ರ ಸರ್ಕಾರ ರೂಪಿಸಿತ್ತು. ಅದರಲ್ಲಿ ರಾಜ್ಯದ ನಗರಗಳು ಹೆಚ್ಚು ಮನ್ನಣೆಗೆ ಪಾತ್ರವಾಗಿರುವುದು ವಿಶೇಷ. ಕಸಮುಕ್ತ ನಗರ ವರ್ಗದಲ್ಲಿ 1, 3 ಮತ್ತು 5 ಸ್ಟಾರ್ ಶ್ರೇಯಾಂಕದಲ್ಲಿ ಮೈಸೂರು ನಗರಕ್ಕೆ 5 ಸ್ಟಾರ್ ಶ್ರೇಯಾಂಕ ಲಭಿಸಿ ದೇಶದಲ್ಲೇ ನಂ.1 ಕಸಮುಕ್ತ ನಗರ ಎಂಬ ಹೆಮ್ಮೆಗೆ ಪಾತ್ರವಾಗಿದೆ. ದಕ್ಷಿಣ ವಲಯದ ಸ್ವಚ್ಛ ನಗರ ಎಂದು ಹೊಸದುರ್ಗ ಪುರಸಭೆಗೆ ಪ್ರಶಸ್ತಿ ಸಿಕ್ಕಿದ್ದರೆ, ಸಾರ್ವಜನಿಕ ಉತ್ತಮ ಪ್ರತಿಕ್ರಿಯೆ ಪ್ರಶಸ್ತಿ ಪಿರಿಯಾಪಟ್ಟಣ ಪುರಸಭೆ ಮತ್ತು ಕೆಆರ್ ನಗರ ನಗರಸಭೆಗೆ ಲಭಿಸಿದೆ. ರಾಜ್ಯ ಒಟ್ಟು 14 ಪ್ರಶಸ್ತಿಗಳನ್ನು ಪಡೆದಿದ್ದು ಪಟ್ಟಿ ಹೀಗಿದೆ:

ಸ್ವಚ್ಛ ಸರ್ವೆಕ್ಷಣ ಪ್ರಶಸ್ತಿ: ಹೊಸದುರ್ಗ, ಕೆಆರ್ ನಗರ, ಪಿರಿಯಾಪಟ್ಟಣ, ಬೃಹತ್ ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಮೈಸೂರು, ಮುಧೋಳ, ಕುಮಟಾ

ಕಸಮುಕ್ತ ನಗರ ಪ್ರಶಸ್ತಿ: ಮೈಸೂರು (5 ಸ್ಟಾರ್ ರೇಟಿಂಗ್), ಹುಬ್ಬಳ್ಳಿ - ಧಾರವಾಡ, ತುಮಕೂರು

ಸಫಾಯಿ ಮಿತ್ರ ಸುರಕ್ಷಾ ಚಾಲೆಂಜ್ ಪ್ರಶಸ್ತಿ: ಮೈಸೂರು

ಸಫಾಯಿ ಮಿತ್ರ ಸಮವಸ್ತ್ರ ಸ್ಪರ್ಧೆ: ·ಮೈಸೂರು

ಇಂದೋರ್​ಗೆ ಸತತ 5ನೇ ಬಾರಿ ಸ್ವಚ್ಛ ನಗರ ಅಗ್ರ ಪಟ್ಟ

ನವದೆಹಲಿ: ದೇಶದ ಅತ್ಯಂತ ಸ್ವಚ್ಛ ನಗರ ಪ್ರಶಸ್ತಿಯನ್ನು ಮಧ್ಯ ಪ್ರದೇಶದ ಇಂದೋರ್ ಸತತ ಐದನೇ ಬಾರಿಗೆ ಮುಡಿಗೇರಿಸಿಕೊಂಡಿದ್ದು ಸ್ವಚ್ಛ ರಾಜ್ಯ ವಿಭಾಗದಲ್ಲಿ ಛತ್ತೀಸ್​ಗಢ ಅಗ್ರ ಸ್ಥಾನ ಪಡೆದುಕೊಂಡಿದೆ. ಸ್ವಚ್ಛ ಭಾರತ ಆಂದೋಲನದ ಅಂಗವಾಗಿ ಸ್ವಚ್ಛತೆಯ ವಿವಿಧ ವಿಭಾಗಗಳಲ್ಲಿ ನೀಡಲಾಗುವ ವಾರ್ಷಿಕ ಪ್ರಶಸ್ತಿಗಳನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಶನಿವಾರ ಪ್ರದಾನ ಮಾಡಿದರು. ‘ಸ್ವಚ್ಛ ಸರ್ವೆಕ್ಷಣಾ ಪ್ರಶಸ್ತಿ-2021’ರ ಅತ್ಯಂತ ಸ್ವಚ್ಛ ನಗರ ಪ್ರಶಸ್ತಿಯ ಎರಡು ಹಾಗೂ ಮೂರನೇ ಸ್ಥಾನ ಅನುಕ್ರಮವಾಗಿ ಸೂರತ್ ಮತ್ತು ವಿಜಯವಾಡದ ಪಾಲಾಗಿವೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಶಸ್ತಿಗಳನ್ನು ಶನಿವಾರ ಪ್ರಕಟಿಸಿದೆ. ಖಾತೆಯ ಸಚಿವ ಹರದೀಪ್ ಸಿಂಗ್ ಪುರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇದ್ದರು.

ಸ್ವಚ್ಛ ಗಂಗಾ ನಗರ: ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದ ವಾರಾಣಸಿ ‘ಅತಿ ಸ್ವಚ್ಛ ಗಂಗಾ ನಗರ’ ಪ್ರಶಸ್ತಿಗೆ ಭಾಜನವಾಗಿದೆ. ಬಿಹಾರದ ಮುಂಗೇರ್ ಮತ್ತು ಪಟನಾ ಈ ವಿಭಾಗದಲ್ಲಿ 2 ಹಾಗೂ 3ನೇ ಸ್ಥಾನ ಗಳಿಸಿವೆ. ಒಂಬತ್ತು ಫೈವ್ ಸ್ಟಾರ್ ನಗರಗಳು ಮತ್ತು 143 ತ್ರಿತಾರಾ ನಗರಗಳು ಕಸರಹಿತ ನಗರಗಳಾಗಿ ಹೊರಹೊಮ್ಮಿವೆ.

ಅತಿ ಸ್ವಚ್ಛ ಟಾಪ್ ಟೆನ್ ನಗರಗಳು: ಇಂದೋರ್, ಸೂರತ್, ವಿಜಯವಾಡ, ನವಿ ಮುಂಬೈ, ನವ ದೆಹಲಿ, ಅಂಬಿಕಾಪುರ, ತಿರುಪತಿ, ಪುಣೆ, ನೋಯ್ಡಾ ಮತ್ತು ಉಜ್ಜಯಿನಿ. ಇವು ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿವೆ.