ಗಂಗೊಳ್ಳಿ: ಸುಖ, ದುಃಖದಲ್ಲಿ ಒಬ್ಬರಿಗೊಬ್ಬರು ಪ್ರೀತಿ ಸಹಕಾರ ನೀಡಿ ನಿಮ್ಮ ದಾಂಪತ್ಯ ಜೀವನ ನಿರ್ವಹಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯ ದಿವ್ಯ ಜ್ಯೋತಿ ನಿರ್ದೇಶಕ ಧರ್ಮಗುರು ಸೀರಿಲ್ ಲೋಬೊ ಹೇಳಿದರು.
ಗಂಗೊಳ್ಳಿ ಕೊಸೆಸಾಂವ್ ಅಮ್ಮನವರ ಇಗರ್ಜಿ ಕುಟುಂಬ ಆಯೋಗ ಮತ್ತು 2025 ಜುಬಿಲಿ ಸಮಿತಿ ಮುಂದಾಳತ್ವದಲ್ಲಿ ಭಾನುವಾರ ದಂಪತಿಯ ಜಯಂತ್ಯುತ್ಸವ ಆಚರಣೆಯಲ್ಲಿ ಮಾತನಾಡಿದರು.
ಸೀರಿಲ್ ಲೋಬೊ, ಗಂಗೊಳ್ಳಿ ಚರ್ಚ್ ಧರ್ಮಗುರು ಥಾಮಸ್ ರೋಶನ್ ಡಿಸೋಜ ನೇತೃತ್ವದಲ್ಲಿ ಪವಿತ್ರ ಬಲಿ ಪೂಜೆ ನೆರವೇರಿತು.ಥಾಮಸ್ ರೋಶನ್ ಡಿಸೋಜ ದಂಪತಿಯನ್ನು ಅಭಿನಂದಿಸಲಾಯಿತು. ದಂಪತಿ ವಿವಾಹ ಪ್ರತಿಜ್ಞೆ ಪುನಃ ಮಾಡಿದರು. ಬ್ಯಾಂಡ್ ಮತ್ತು ಬಣ್ಣದ ಕೊಡೆಗಳ ಮೂಲಕ ಮೆರವಣಿಗೆಯಲ್ಲಿ ದಂಪತಿಯನ್ನು ಸಂತ ಜೋಸೆಫ್ ವಾಜರ ಸಭಾಂಗಣಕ್ಕೆ ಕರೆದೊಯ್ಯಲಾಯಿತು. ವಿವಿಧ ಬಗೆಯ ನೃತ್ಯ ಕಾರ್ಯಕ್ರಮ ನೆರವೇರಿಸಲಾಯಿತು. ಕೊಂಕಣಿ ಕ್ರೈಸ್ತ ಸಂಪ್ರದಾಯದ ಹಾಡುಗಳನ್ನು (ವೋವಿಯೋ ವೇರ್ಸ್) ಹಾಡಿದರು. ದೇವಾಲಯ ಪಾಲನಾ ಮಂಡಳಿ ಉಪಾಧ್ಯಕ್ಷ ಆಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಗ್ಲೋರಿಯ ಡಿಸೋಜ, ಕಾನ್ವೆಂಟಿನ ಸುಪೀರಿಯರ್ ಧರ್ಮಭಗಿನಿ ಡಯಾನ, ಕುಟುಂಬ ಆಯೋಗ ಸಂಚಾಲಕ ಫೆಲಿಕ್ಸ್ ರೆಬೇರೊ ಹಾಗೂ ಕುಟುಂಬ ಆಯೋಗದ ಮತ್ತು ಜುಬಿಲಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಧರ್ಮಭಗಿನಿ ಆನೆಟ್ ಸ್ವಾಗತಿಸಿ, ಫೆಲ್ಸಿ ಡಿಸಿಲ್ವ ವಂದಿಸಿದರು. ರೆನಿಟಾ ಬಾರ್ನೆಸ್ ಮತ್ತು ವಿನ್ಸಿಟಾ ಲೋಬೊ ಕಾರ್ಯಕ್ರಮ ನಿರೂಪಿಸಿದರು.