ಕೂಡ್ಲಿಗಿ ತಾಲೂಕಿನ ನಾಗರಹುಣಿಸೆ ಗ್ರಾಮದಲ್ಲಿ ಹಿಂದುಗಳು ಮೊಹರಂ ಆಚರಣೆ ಅಂಗವಾಗಿ ಲಾಲ್ ಸಾಬ್, ಚಾಂದ್ ಲಾಲ್ ಹಾಗೂ ಹಸೇನ್, ಹುಸೇನ್ ಪೀರಲು ದೇವರನ್ನು ಪ್ರತಿಷ್ಠಾಪಿಸಿರುವುದು. 
ಜಿಲ್ಲೆ

ಮುಸ್ಲಿಮರು ಇಲ್ಲದ ಊರಲ್ಲಿ ಮೊಹರಂ ಆಚರಣೆ

ರುದ್ರಪ್ಪ ವಾಲಿ

ಕೂಡ್ಲಿಗಿ: ಮೊಹರಂ ಹಿಂದು-ಮುಸ್ಲಿಂ ಸಾಮರಸ್ಯ ಸಾರುವ ಹಬ್ಬವಾಗಿದ್ದು, ನಾಗರಹುಣಿಸೆ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಒಂದು ಕುಟುಂಬ ಇಲ್ಲದಿದ್ದರೂ ಮೊಹರಂ ಹಬ್ಬವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಆಚರಿಸುತ್ತ ಸಾಮಾಜಿಕ ವ್ಯವಸ್ಥೆಯಲ್ಲಿ ಮಾದರಿಯಾಗಿದ್ದಾರೆ ಗ್ರಾಮಸ್ಥರು.
ರಾಮದುರ್ಗ ಗ್ರಾಪಂ ವ್ಯಾಪ್ತಿಯ ನಾಗರಹುಣಿಸೆಯಲ್ಲಿ ಅಲಾಯಿ ದೇವರ ಪ್ರತಿಷ್ಠಾಪನೆ, ಮೆರವಣಿಗೆ, ಮೊಹರಂ ಆಚರಣೆಯ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ಗ್ರಾಮದ ಹಿಂದುಗಳೇ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸುತ್ತಾರೆ.

ಗ್ರಾಮದಲ್ಲಿ ಎಂದಿನಂತೆ ಈ ಬಾರಿಯೂ ಲಾಲ್‌ಸಾಬ್, ಚಾಂದ್‌ಲಾಲ್ ಹಾಗೂ ಹಸೇನ್, ಹುಸೇನ್ ಪೀರಲು ದೇವರನ್ನು ಪ್ರತಿಷ್ಠಾಪಿಸಲಾಗಿದೆ. ಕಳೆದೆರಡು ದಿನಗಳಿಂದ ಗ್ರಾಮದಲ್ಲಿ ದೇವರ ಪಾನಕ ಸೇವನೆ ಸೇರಿದಂತೆ ವಿಶೇಷ ಪೂಜೆ ಪುನಸ್ಕಾರಗಳು ಅನೂಚಾನವಾಗಿ ಜರುಗುತ್ತಿವೆ. ಗ್ರಾಮದ ಬೀದಿ ಬೀದಿಯಲ್ಲೂ ಭಕ್ತಿಯ ಪರಕಾಷ್ಠೆ ಎದ್ದುಕಾಣುತ್ತಿದೆ.

ನಾಗರಹುಣಿಸೆ ಗ್ರಾಮದಲ್ಲಿ 700 ಕ್ಕೂ ಹೆಚ್ಚು ಜನಸಂಖ್ಯೆ ಇದ್ದು ವೀರಶೈವರು, ಲಿಂಗಾಯತರು, ಊರುಗೊಲ್ಲರು, ಜಂಗಮರು, ಕುರುಬರು, ವಾಲ್ಮೀಕಿ ನಾಯಕರು, ಮಾದಿಗರು, ಭೋವಿವಡ್ಡರು,ಶಿಳ್ಯೇಕ್ಯಾತರು, ಡೊಂಬರು, ಕಂಬಾರರು, ಸಮುದಾಯದವರು ಇಲ್ಲಿನ ನಿವಾಸಿಗಳಾಗಿದ್ದಾರೆ. ಪೂರ್ವಜರ ಕಾಲದಿಂದಲೂ ಮೊಹರಂ ಆಚರಣೆ ತಪ್ಪಿಸಿಲ್ಲ. ಈ ಊರು ನಾನಾ ಜಾತಿ ಜನಾಂಗಗಳ ಶಾಂತಿಯ ತೋಟವಾಗಿದೆ ಎನ್ನುತ್ತಾರೆ ಗ್ರಾಮದ ಯುವ ಮುಖಂಡ ಜಿ.ರಾಜಶೇಖರ್.

ಗ್ರಾಮದಲ್ಲಿ ಮೊಹರಂ ವೇಳೆ ರಾಮದುರ್ಗ ಇಲ್ಲವೇ ಸಿಎಸ್ ಪುರ ಗ್ರಾಮದ ಮುಸ್ಲಿಂ ಸಮುದಾಯದ ಸದಸ್ಯರೊಬ್ಬರನ್ನು ಊರಿಗೆ ಕರೆಯಿಸಲಾಗುತ್ತದೆ. ಇವರ ಮಾರ್ಗದರ್ಶನದಲ್ಲಿ 5 ದಿನ ಅಲಾಯಿ ದೇವರ ಪೂಜೆ, ಪುನಸ್ಕಾರ, ಧಾರ್ಮಿಕ ವಿಧಿ ವಿಧಾನಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಲಾಗುತ್ತದೆ. ಮೊಹರಂ ಕೊನೆಯ ದಿನ ಅತ್ಯಂತ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಗುತ್ತದೆ.