ಚಾಮರಾಜನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್ ಮಂಜುನಾಥ್ ಜಯಗಳಿಸಿದ ಹಿನ್ನೆಲೆಯಲ್ಲಿ ಬುಧವಾರ ಮುಸ್ಲಿಂ ಅಭಿಮಾನಿಯೊಬ್ಬರು ಮಾದಪ್ಪನಿಗೆ ಮುಡಿ ಕೊಟ್ಟು ಹರಕೆ ತೀರಿಸಿದ್ದಾರೆ.
ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ರಾಮನಗರ ಮೂಲದ ಯೂನಸ್ ಖಾನ್ ಮುಡಿ ನೀಡಿ ಹರಕೆ ತೀರಿಸಿದರು. ಡಾ.ಮಂಜುನಾಥ್ ಅವರು ಗೆದ್ದರೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಮಾದಪ್ಪನಿಗೆ ಮುಡಿ ನೀಡುತ್ತೇನೆಂದು ಯೂನಸ್ ಖಾನ್ ಹರಕೆ ಹೊತ್ತಿದ್ದರಂತೆ. ಹಾಗಾಗಿ ಬುಧವಾರ ಸ್ನೇಹಿತರೊಂದಿಗೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಮುಡಿ ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿದ ನೆಟ್ಟಿಗರು ಹೃದಯವಂತ ವೈದ್ಯನಿಗೆ ಹೃದಯ ವೈಶಾಲ್ಯವಿರುವ ಅಭಿಮಾನಿ, ಭಾವೈಕ್ಯತೆ ಮೆರೆದ ಅಭಿಮಾನಿ ಎಂದೆಲ್ಲಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೆ ಡಿಕೆ ಸುರೇಶ್ ವಿರುದ್ಧ ಡಾ. ಸಿಎನ್ ಮಂಜುನಾಥ್ ಬರೋಬ್ಬರಿ 2,29,947 ಮತಗಳಿಗೂ ಹೆಚ್ಚು ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ 9,54,560 ಮತಗಳನ್ನು ಗಳಿಸಿದರೆ, ಡಿಕೆ ಸುರೇಶ್ 7,50,886 ಮತಗಳನ್ನು ಗಳಿಸಲಷ್ಟೇ ಶಕ್ತರಾಗಿ ಸೋಲೊಪ್ಪಿಕೊಂಡಿದ್ದಾರೆ.