ಜಿಲ್ಲೆ

ತವರಿಗೆ ಹೋಗಿ ದುಡ್ಡು ತಗೊಂಡು ಬಾ ಎನ್ನುತ್ತ ಯಮಲೋಕಕ್ಕೆ ಅಟ್ಟಿದ ಪಾಪಿ!

manjunathktgns

ಬೆಂಗಳೂರು: ಕತ್ತರಿಯಿಂದ ಪತ್ನಿಯ ಕತ್ತಿಗೆ ಇರಿದು ಹತ್ಯೆ ಮಾಡಿದ್ದ ಆರೋಪಿಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಯಲಹಂಕ ಅಳ್ಳಾಳಸಂದ್ರದ ನಿವಾಸಿ ಜಾನ್ಸನ್ (27) ಬಂಧಿತ. ನಂದಿನಿ ಕೊಲೆಯಾದ ಮಹಿಳೆ.

2015ರಲ್ಲಿ ನಂದಿನಿಯನ್ನು ಪ್ರೀತಿಸಿ ವಿವಾಹವಾಗಿದ್ದ ಜಾನ್ಸನ್, ಆರಂಭದಲ್ಲಿ ಪತ್ನಿ ಜತೆ ಅನ್ಯೋನ್ಯವಾಗಿದ್ದ. ಕಳೆದ ಮೂರು ವರ್ಷಗಳಿಂದ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಪತ್ನಿ ಬೇರೆ ದಾರಿ ಕಾಣದೆ ಆಗಾಗ ತವರುಮನೆಯಿಂದ ಹಣ ತೆಗೆದುಕೊಂಡು ಬರುತ್ತಿದ್ದಳು. ಅಷ್ಟಕ್ಕೆ ಸುಮ್ಮನಾಗದ ಜಾನ್ಸನ್ ಇನ್ನೂ ಹೆಚ್ಚಿನ ಹಣ ತರುವಂತೆ ಕಿರುಕುಳ ಕೊಡುತ್ತಿದ್ದ.

ಆ.16ರಂದು ರಾತ್ರಿ 9 ಗಂಟೆಗೆ ವರದಕ್ಷಿಣೆ ವಿಚಾರವಾಗಿ ಪತ್ನಿಯೊಂದಿಗೆ ಜಾನ್ಸನ್ ಜಗಳ ಮಾಡಿದ್ದ. ಆಕ್ರೋಶಗೊಂಡ ಆರೋಪಿಯು ಮನೆಯಲ್ಲಿದ್ದ ಕತ್ತರಿಯಿಂದ ಪತ್ನಿಯ ಕತ್ತಿಗೆ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ. ನಂದಿನಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಳು.

ನೆರೆಹೊರೆ ನಿವಾಸಿಗಳು ನಂದಿನಿ ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.