ಜಿಲ್ಲೆ

8ರಂದು ನಡೆಯುವ ಮಹಾನಗರ ಪಾಲಿಕೆ ನೌಕರರ ಹೋರಾಟಕ್ಕೆ ಪೌರ ಕಾರ್ಮಿಕರ ಸಂಘಟನೆಗಳ ಬೆಂಬಲ

ಬೆಂಗಳೂರು: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತು, ಜು.8ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಲಿರುವ ಬೃಹತ್ ಪ್ರತಿಭಟನೆಗೆ, ರಾಜ್ಯ ನಗರಪಾಲಿಕೆ ನಗರಸಭೆ ಪುರಸಭೆಗಳ ಪೌರ ಕಾರ್ಮಿಕರ ಸಂಘ, ಬಿಬಿಎಂಪಿ ಸ್ವಚ್ಚತಾ ಪೌರ ಕಾರ್ಮಿಕರ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ.

ಬಿಬಿಎಂಪಿ ನೌಕರರ ಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ಮಾತನಾಡಿ, ಬಿಬಿಎಂಪಿಯಲ್ಲಿ 12 ಬೇಡಿಕೆ ಮತ್ತು ಮಹಾನಗರ ಪಾಲಿಕೆಯಲ್ಲಿ 6 ಬೇಡಿಕೆಗಳ ಈಡೇರಿಕೆಗಾಗಿ ಅಧಿಕಾರಿ ಮತ್ತು ನೌಕರರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಕಚೇರಿ ಮತ್ತು ಹೊರಗಡೆ ಕೆಲಸ ನಿರ್ವಹಿಸುತ್ತಿರುವುದರಿಂದ ಲಾಪ್​​​ ಅಪ್ ಪದ್ಧತಿ ಕೈಬಿಡಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿದ್ಯಾ ಇಲಾಖೆಯ ಪ್ರಾಂಶುಪಾಲರು, ಮುಖ್ಯೋಪಾಧ್ಯಯರು ಮೇಲಿನ ವಿಚಾರಣೆಯನ್ನು ಕೈಬಿಡಬೇಕು ಎಂದರು.

ಸಹಾಯಕ ಕಾರ್ಯಪಾಲಕ, ಕಾರ್ಯಪಾಲಕ ಅಭಿಯಂತರುಗಳಗೆ ಮುಂಬಡ್ತಿ ನೀಡಬೇಕು. ಇ- ಆಸ್ತಿ ನೋಂದಣಿ ಪದ್ಧತಿಯನ್ನು ಹಿಂದೆ ಇರುವ ನಿಯಮದಂತೆ ಮುಂದುವರೆಸಬೇಕು. ಸರ್ಕಾರಿ ನೌಕರರಿಗೆ ಸಿಗುವ ಆರೋಗ್ಯ ಸೌಲಭ್ಯವನ್ನು ಪಾಲಿಕೆ ನೌಕರರಿಗೂ ವಿಸ್ತರಿಸಬೇಕು. ಎರವಲು ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಬೇಕು. ನೌಕರರ ಜೇಷ್ಠತಾ ಪಟ್ಟಿ ಅಂತಿಮಗೊಳಿಸಬೇಕು. ಹೆಲ್ತ್ ಸೂಪರ್ ವೈಸರ್‌ಗಳಿಗೆ ವಾಣಿಜ್ಯ ಪರವಾನಗಿ ನೀಡುವ ಅಧಿಕಾರ ನೀಡಬೇಕು. ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಮಾರ್ಷಲ್ ರದ್ದುಪಡಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

7ನೇ ವೇತನ ಆಯೋಗದ ಮಹಾನಗರ ಪಾಲಿಕೆ ನೌಕರರಿಗೆ ವಿಸ್ತರಣೆ, ವೃಂದ ಮತ್ತು ನೇಮಕಾತಿಯಲ್ಲಿ ತಿದ್ದುಪಡಿ ತರಬೇಕು. ಕೆಜಿಐಡಿ, ಜಿಪಿಎ್ ಸೌಲಭ್ಯ ಕಲ್ಪಿಸಬೇಕು. ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಾಗಬೇಕು. ಪ್ರತಿವರ್ಷ ಕ್ರೀಡಾಕೂಟ ಆಯೋಜನೆ ಮಾಡಬೇಕು. ಮಹಾನಗರ ಪಾಲಿಕೆಯಲ್ಲಿ ಹಲವಾರು ವರ್ಷಗಳಿಂದ ಮುಂಬಡ್ತಿ ನೀಡಿಲ್ಲ. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಮಾಡಲು ಮುಂದಾಗಿದ್ದೇವೆ ಎಂದು ಅಮೃತ್‌ರಾಜ್ ಹೇಳಿದರು. ಸಂಘದ ಉಪಾಧ್ಯಕ್ಷರಾದ ಕೆ.ಜಿ.ರವಿ ಮತ್ತು ಸಾಯಿಶಂಕರ್, ಪದಾಧಿಕಾರಿಗಳಾದ ಎಸ್.ಜಿ.ಸುರೇಶ್, ಎ.ಜೆ.ಬಾಬು, ಮಂಜುನಾಥ್, ರುದ್ರೇಶ್, ಸಂತೋಷ್ ಕುಮಾರ್ ನಾಯಕ್, ತಿಪ್ಪೇಶ್, ರೇಣುಕಾಂಬ, ಕೆ. ನರಸಿಂಹ, ಶ್ರೀಧರ್, ಎಚ್.ಬಿ.ಹರೀಶ್, ಮಾರ್ಕೆಟ್ ಮಂಜುನಾಥ್ ಮತ್ತಿತರರಿದ್ದರು.