ಜಿಲ್ಲೆ

ಸಾರ್ವಜನಿಕರಿಗೆ ಕಾಟಾಚಾರದ ಮಾಹಿತಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ನಾಲ್ಕು ಹೋಬಳಿಗಳಿಗೆ ಕೇವಲ ಒಬ್ಬ ಸಹಾಯಕ ತೋಟಗಾರಿಕಾ ಅಧಿಕಾರಿ ಕಾರ್ಯನಿರ್ವಹಿಸಬೇಕಿದ್ದು, ಇಲಾಖೆ ಮಾಹಿತಿ ಸಭೆಗಳನ್ನು ಗ್ರಾಮಮಟ್ಟದಲ್ಲಿ ನಡೆಸಲು ಅಸಾಧ್ಯವಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ರಾಹುಲ್ ಅಸಹಾಯಕತೆ ವ್ಯಕ್ತಪಡಿಸಿದರು.

ಮುದರಂಗಡಿ ಚರ್ಚ್ ಸಭಾಂಗಣದಲ್ಲಿ ಶುಕ್ರವಾರ ಮುದರಂಗಡಿ ಗ್ರಾಪಂನ 2024-25ನೇ ಸಾಲಿನ ಪ್ರಥಮ ಗ್ರಾಮಸಭೆಯಲ್ಲಿ ಗ್ರಾಮಸ್ಥ ಮೈಕೆಲ್, ಕೇವಲ ಗ್ರಾಮಸಭೆಗಳಲ್ಲಿ ಕಾಟಾಚಾರಕ್ಕೆ ಮಾಹಿತಿ ನೀಡುವ ನಿಮ್ಮ ಕ್ರಮ ಸರಿಯಿಲ್ಲ. ಇಲಾಖೆ ಯೋಜನೆಗಳ ಮಾಹಿತಿ ಗ್ರಾಮೀಣ ಮಟ್ಟದಲ್ಲಿ ಜನರಿಗೆ ತಲುಪುತ್ತಿಲ್ಲ ಎನ್ನುವ ದೂರಿಗೆ ಉತ್ತರಿಸಿದರು.

ಮುದರಂಗಡಿ ಗ್ರಾಪಂ ವ್ಯಾಪ್ತಿಯಲ್ಲಿ ಮುಚ್ಚಿರುವ ಹಾಗೂ ಮುಚ್ಚುವ ಕನ್ನಡ ಮಾಧ್ಯಮ ಶಾಲೆಗಳಿಗೆ ಸಂಬಂಧಿಸಿದ ದಾಖಲೆಗಳು ಮುಂದಿನ ದಿನಗಳಲ್ಲಿ ಸಾಂತೂರುಕೊಪ್ಲ ಸರ್ಕಾರಿ ಶಾಲೆಯಲ್ಲಿ ಲಭ್ಯವಾಗಲಿದೆ ಎಂದು ಶಿಕ್ಷಣ ಸಂಯೋಜಕ ರಾಮಕೃಷ್ಣ ಭಟ್ ತಿಳಿಸಿದರು.

ಪ್ರಾಥಮಿಕ ಅರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸುಬ್ರಮಣ್ಯ ಪ್ರಭು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಫಿಲೋಮೀನಾ, ಮೆಸ್ಕಾಂ ಮುದರಂಗಡಿ ಶಾಖಾಧಿಕಾರಿ ಎಂ.ಹುಸೇನ್, ರುಡ್‌ಸೆಟ್‌ನ ಸಂತೋಷ್, ಪಶುಪಾಲನಾ ಇಲಾಖೆ ಶಿವಪುತ್ರಯ್ಯ ಗುರುಸ್ವಾಮಿ ಇಲಾಖಾ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷೆ ನಮಿತಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮೋಹಿನಿ ಸಿ ಹೆಗ್ಡೆ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಲೆಕ್ಕಸಹಾಯಕ ಶಿವರಾಮ್ ಕಾರ್ಯಕ್ರಮ ನಿರೂಪಿಸಿದರು.

ಎಲ್ಲ ಮನೆಗಳಿಗಿಲ್ಲ ನೀರಿನ ಸಂಪರ್ಕ

ಜೆಜೆಎಂ ಯೋಜನೆಯಲ್ಲಿ ಗ್ರಾಮದ ಎಲ್ಲ ಮನೆಗಳಿಗೆ ನೀರಿನ ಸಂಪರ್ಕವಾಗದಿರುವ ಬಗ್ಗೆ ಇಂಜಿನಿಯರ್ ಪ್ರಸಾದ್ ಅವರನ್ನು ಮೈಕಲ್ ತರಾಟೆಗೆ ತೆಗೆದುಕೊಂಡರು. ಈ ವೇಳೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಮೈಕಲ್ ಅವರೊಂದಿಗೆ ವಾಗ್ವಾದ ನಡೆಸಿದರು. ನೀರು ಸಂಪರ್ಕದ ನಿರ್ವಹಣೆಯನ್ನು ಗ್ರಾಪಂ ಮಾಡಬೇಕಿದ್ದು, ಗ್ರಾಪಂ ನಿರ್ಣಯದಂತೆ 3000ರೂ. ಠೇವಣಿ ಪಾವತಿಸಿದಲ್ಲಿ ನೀರಿನ ಸಂಪರ್ಕಕ ಕಲ್ಪಿಸಲಾಗುತ್ತದೆ. ಜನರ ಬೇಡಿಕೆಯಂತೆ ನೀರಿನ ಸಂಪರ್ಕ ಕಲ್ಪಿಸಲು ಗ್ರಾಪಂ ಬದ್ಧವಾಗಿದೆ ಎಂದು ಪಿಡಿಒ ಮುತ್ತು ತಿಳಿಸಿದರು.

ಬೀದಿನಾಯಿ ಹಾವಳಿ ಹೆಚ್ಚಳ

ಗ್ರಾಪಂ ವ್ಯಾಪ್ತಿಯಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದ್ದು, ಲಸಿಕಾ ಅಭಿಯಾನ ನಡೆಸುವಂತೆ ಡೇವಿಡ್ ಡಿಸೋಜ ಪಶುಪಾಲನಾ ಇಲಾಖೆಯನ್ನು ಆಗ್ರಹಿಸಿದರು. ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಶವಾಗಾರಕ್ಕೆ ತೆರಳುವ ರಸ್ತೆ ಅಭಿವೃದ್ಧಿ ಹಾಗೂ ಬೀದಿದೀಪ ಅಳವಡಿಕೆಗೆ ಗ್ರಾಪಂ, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ಬೇಡಿಕೆ ಸಲ್ಲಿಸುವಂತೆ ಡೇವಿಡ್ ಸಲಹೆ ನೀಡಿದರು. ಕೃಷಿಕರಿಗೆ ಕಾಡು ಪ್ರಾಣಿ ಹಾವಳಿ ಹಾಗೂ ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡುವಂತೆ ನಿರ್ಣಯ ಕೈಗೊಳ್ಳಲು ಪ್ರಕಾಶ್ ಶೆಟ್ಟಿ ಒತ್ತಾಯಿಸಿದರು.