ಜಿಲ್ಲೆ

ಮಹಾಮೂಡಪ್ಪ ಸೇವಾ ದ್ರವ್ಯ ಸಮರ್ಪಣೆ : 4 ದಿನ 128 ಕಾಯಿಗಳ ಅಷ್ಟದ್ರವ್ಯ ಯಾಗ : ಶ್ರೀ ಮಹಾಗಣಪತಿ ಮಂತ್ರಾನುಷ್ಠಾನ

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿಗೆ ಮೂಡಪ್ಪ ಸೇವೆಯ ಸಂಭ್ರಮದ ಜತೆಗೆ ಮಹಾಮೂಡಪ್ಪ ಸೇವೆಯ ದ್ರವ್ಯಗಳನ್ನು ಗುರುವಾರ ದೇವಸ್ಥಾನಕ್ಕೆ ಶ್ರದ್ಧಾಭಕ್ತಿಯಿಂದ ಮಂಗಳಘೋಷದೊಂದಿಗೆ ತರಲಾಯಿತು.

ಕಾರ್ಯಕ್ರಮಕ್ಕೂ ಮೊದಲು ತಂತ್ರಿವರ್ಯಉಳಿಯತ್ತಾಯ ವಿಷ್ಣು ಆಸ್ರ ನೇತೃತ್ವದಲ್ಲಿ ದೇವರ ದೀಪದ ಬಲಿ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಶತರುದ್ರಾಭಿಷೇಕ, 128 ಕಾಯಿಗಳ ಅಷ್ಟದ್ರವ್ಯ ಮಹಾಗಣಪತಿ ಯಾಗ ಮತ್ತು ಶ್ರೀ ಮಹಾಗಣಪತಿ ಮಂತ್ರಾನುಷ್ಠಾನದೊಂದಿಗೆ ಮೂಡಪ್ಪ ಸೇವಾ ಸಮರ್ಪಣೆ ಸಿದ್ಧತೆ ಆರಂಭಗೊಂಡಿತು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಜೆ ಉತ್ಸವ ಬಲಿ, ಶ್ರೀ ಮಹಾಗಣಪತಿ ಮಂತ್ರಾನುಷ್ಠಾನ ನಡೆಯಿತು.

ಅರಿಕೊಟ್ಟಿಗೆ ಮುಹೂರ್ತ

ಏ.2ರಿಂದ 5ರವರೆಗೆ ಸತತ ನಾಲ್ಕು ದಿನಗಳ ಕಾಲ 128 ಕಾಯಿಗಳ ಅಷ್ಟ ದ್ರವ್ಯ ಮಹಾಗಣಪತಿ ಯಾಗ ಮತ್ತು ಶ್ರೀ ಮಹಾಗಣಪತಿ ಮಂತ್ರಾನುಷ್ಠಾನದೊಂದಿಗೆ ಉತ್ಸವ ನಡೆಯಲಿದೆ. 5ರಂದು ಬೆಳಗ್ಗೆ 9ಕ್ಕೆ ಮಹಾ ಮೂಡಪ್ಪ ಸೇವೆಯ ಅರಿಕೊಟ್ಟಿಗೆ ಮುಹೂರ್ತ ನಡೆಯಲಿದೆ. ಬಳಿಕ ಅಪ್ಪ ತಯಾರಿ ಆರಂಭವಾಗಲಿದೆ.

ಬೆಳಗ್ಗೆ ದೇವರಿಗೆ ಕಲಶಾಭಿಷೇಕ ಮಾಡಿ ತಂತ್ರಿವರ್ಯರು ಅರಿಕೊಟ್ಟಿಗೆ ಪ್ರವೇಶಿಸುವರು. ಅಲ್ಲಿ ದ್ವಿಜರಿಗೆ ಮುಹೂರ್ತದಾನ, ದಕ್ಷಿಣೆಗಳನ್ನು ಕೊಟ್ಟು ಅಪ್ಪಣೆ ಪಡೆದು ದೇವ ನಂದಾದೀಪದಿಂದ ತಂದ ದೀಪದಿಂದ ಅಗ್ನಿ ಪ್ರತಿಷ್ಠಾಪನೆ ಮಾಡಲಾಗುವುದು. ಅದರಲ್ಲಿ ಅಪ್ಪದ ಹೊಸ ಕಾವಲಿಯನ್ನಿಟ್ಟು ಗಣಪತಿ ಪ್ರಾರ್ಥನೆಯೊಂದಿಗೆ ಮುಖ್ಯ ಕಾರ್ಮಿಕತ್ವದ ತಂತ್ರಿಗಳು ಆರಂಭದ ಅಪ್ಪ ಹೊಯ್ಯುವರು. ಬಳಿಕ ಅಪ್ಪ ತಯಾರಿ ಅಧಿಕಾರ ಹಸ್ತಾಂತರಿಸುವರು. ತಯಾರಾಗುವ ಸಾವಿರಾರು ಅಪ್ಪಗಳು ಆ ರಾತ್ರಿಯೇ ಗಣಪತಿ ದೇವರನ್ನು ಮುಚ್ಚಿಕೊಳ್ಳಲಿವೆ. ಅಂದು ಸಂಜೆ ಉತ್ಸವ ಬಲಿ ನಡೆದು, ಮೂಲಸ್ಥಾನ ಉಳಿಯತ್ತಡ್ಕಕ್ಕೆ ದೇವರ ಸವಾರಿ ನಡೆದು, ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ ಜರುಗಿದ ಬಳಿಕ ರಾತ್ರಿ 10ಕ್ಕೆ ಶ್ರೀಭೂತಬಲಿ ಮಹಾಮೂಡಪ್ಪಾಧಿವಾಸ ಹೋಮ ನಡೆಯಲಿದೆ. ಬಳಿಕ ಶ್ರೀಮಹಾಗಣಪತಿ ದೇವರಿಗೆ ಮೂಡಪ್ಪ ಸಮರ್ಪಣೆಯಾಗಲಿದೆ.

12 ಮುಡಿ ಅಕ್ಕಿಯ ಬೆಲ್ಲದ ಅಪೂಪ

ರಾತ್ರಿ ಬೆಡಿ ಉತ್ಸವ ಪೂರೈಸಿ ಅತ್ತಾಳ ಪೂಜೆಯಲ್ಲಿ ಆಚಾರ್ಯರಿಂದ ಶ್ರೀ ಮಹಾರಂಗಪೂಜೆ ಅಂಗವಾಗಿ ಒಂದುಮುಡಿ ಅಕ್ಕಿಯ ನೈವೇದ್ಯ ಮದನಂತೇಶ್ವರನಿಗೆ ಸಮರ್ಪಿಸಲಾಗುವುದು. ಒಂದು ಮುಡಿ ಅಕ್ಕಿಯ ಹವಿಸ್ಸನ್ನು ಪೂಜಿಸಿ ಶ್ರೀಮಹಾಗಣಪತಿ ದೇವರ ಮುಂಭಾಗದಲ್ಲಿ ಕಬ್ಬಿನಿಂದ ಬೇಲಿ ರಚಿಸಿ ಅದರಲ್ಲಿ 12 ಮುಡಿ ಅಕ್ಕಿಯ ಬೆಲ್ಲದ ಅಪೂಪವನ್ನು ಹಾಗೂ ಒಂದು ಮುಡಿ ಅಕ್ಕಿಯ ಪಚ್ಚಪ್ಪವನ್ನು ತುಂಬಲಾಗುವುದು. ಅದಕ್ಕೆ 128 ಕಾಯಿ ಅಷ್ಟದ್ರವ್ಯ, ಮೋದಕ, ಜೇನು, ತುಪ್ಪ, ಸಕ್ಕರೆ ಮಿಶ್ರಣ ಮಾಡಿದ ಬಳಿಕ ಪರ್ವತಾಕಾರದ ಅಪ್ಪದ ರಾಶಿಯನ್ನು ಗಣಪತಿಯ ಬಾಯಿಯವರೆಗೂ ಅಲಂಕರಿಸಿ ಕಲ್ಪೋಕ್ತ ಪೂಜೆ ಮಾಡಿ ಪ್ರಾರ್ಥಿಸಲಾಗುವುದು.

ಶಿವ ಸನ್ನಿಧಿಯಲ್ಲೂ ಗುಡಾಪೂಪ

ಶಿವ ಸನ್ನಿಧಿಯಲ್ಲೂ ಮೂರು ಮುಡಿ ಅಕ್ಕಿಯ ಗುಡಾಪೂಪ, 9 ಸೇರಿನ ಪಚ್ಚಪ್ಪ ಅರ್ಪಿಸಲಾಗುತ್ತದೆ. ಮೊದಲು ಮದನಂತೇಶ್ವರ ಸನ್ನಿಧಿಯಲ್ಲಿ ಪ್ರಾರ್ಥಿಸಿ ದ್ವಾರಬಂಧನ ಮಾಡಿ, ಗಣಪತಿ ಗುಡಿಯ ದ್ವಾರ ಬಂಧಿಸಲಾಗುತ್ತದೆ. ಮರುದಿನ ಸೂರ್ಯೋದಯಕ್ಕೆ ಹತ್ತು ಸಮಸ್ತರ ಮುಂದೆ ಪ್ರಾರ್ಥಿಸಿ, ಕವಾಟೋದ್ಘಾಟನೆ ನಡೆಯಲಿದ್ದು, ಬಳಿಕ ಭಕ್ತ ಜನರಿಗೆ ಅಪ್ಪಪ್ರಸಾದ ವಿತರಣೆಯಾಗಲಿದೆ.