ಜಿಲ್ಲೆ

ಮುಡಾ ಹಗರಣ, 92 ಸೈಟ್ ಮುಟ್ಟುಗೋಲು: ಮುಂದುವರಿದ ಇ.ಡಿ. ಕಾರ್ಯಾಚರಣೆ, 100 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬಹುಕೋಟಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.)100 ಕೋಟಿ ರೂ. ಅಂದಾಜು ಮೌಲ್ಯದ 92 ಸ್ಥಿರಾಸ್ತಿಗಳನ್ನು (ನಿವೇಶನ) ಮುಟ್ಟುಗೋಲು ಹಾಕಿಕೊಂಡಿದೆ. ಇದರೊಂದಿಗೆ ಇ.ಡಿ. ಜಪ್ತಿ ಮಾಡಿದ ಒಟ್ಟಾರೆ ಆಸ್ತಿಯ ಮೌಲ್ಯದ 400 ಕೋಟಿ ರೂ. ಮುಟ್ಟಿದಂತಾಗಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್​ಎ) ಅಡಿ ತಾತ್ಕಾಲಿಕವಾಗಿ ಈ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಎಲ್ಲ ಸ್ಥಿರಾಸ್ತಿಗಳನ್ನು ವಸತಿ ಸಹಕಾರಿ ಸಂಘ ಮತ್ತು ಮುಡಾ ಅಧಿಕಾರಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್​ಗಳ ಅಡಿ ಎಫ್​ಐಆರ್ ದಾಖಲಿಸಿದ್ದರು. ಎಫ್​ಐಆರ್ ಆಧಾರದ ಮೇಲೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದ ಇ.ಡಿ ತನಿಖೆ ನಡೆಸುತ್ತಿದೆ. ವಿವಿಧ ಕಾನೂನು, ಸರ್ಕಾರಿ ಆದೇಶ ಹಾಗೂ ಮಾರ್ಗಸೂಚಿ ಉಲ್ಲಂಘಿಸಿ ಮತ್ತು ಇತರ ಮೋಸದ ವಿಧಾನಗಳ ಮುಖಾಂತರ ಮುಡಾ ಸೈಟ್ ಹಂಚಿಕೆಯಲ್ಲಿ ಬೃಹತ್ ಪ್ರಮಾಣದ ಹಗರಣ ನಡೆಸಿರುವುದು ಇ.ಡಿ ತನಿಖೆಯಲ್ಲಿ ಬಹಿರಂಗವಾಗಿದೆ.

ಮಾಜಿ ಆಯುಕ್ತರ ಪಾತ್ರ ಪ್ರಮುಖ: ಅನರ್ಹರಿಗೆ ನಿವೇಶನ ಪರಿಹಾರ ಹಂಚಿಕೆಯಲ್ಲಿ ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಸೇರಿ ಇತರ ಮಾಜಿ ಆಯುಕ್ತರ ಪಾತ್ರ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಚರ ಹಾಗೂ ಸ್ಥಿರ ಆಸ್ತಿಗಳ ರೂಪದಲ್ಲಿ ಅಕ್ರಮ ಹಂಚಿಕೆ ಮಾಡಲು ನಗದು, ಬ್ಯಾಂಕ್ ವರ್ಗಾವಣೆ ಮುಖಾಂತರ ಲಂಚ ಪಡೆದಿರುವ ಬಗ್ಗೆ ಇ.ಡಿ ಸಾಕ್ಷ್ಯ ಸಂಗ್ರಹಿಸಿದೆ. ನಿವೇಶನಗಳ ಅಕ್ರಮ ಹಂಚಿಕೆಯಲ್ಲಿ ಅನರ್ಹ ಫಲಾನುಭವಿ ಗುರುತಿಸುವುದು, ನಕಲಿ ದಾಖಲೆ, ಅಪೂರ್ಣ ದಾಖಲೆ ಬಳಸಿಕೊಂಡು ಸರ್ಕಾರಿ ಆದೇಶ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಕೆಲ ಸಂದರ್ಭಗಳಲ್ಲಿ ಹಂಚಿಕೆ ಪತ್ರಗಳ ಹಿಂದಿನ ದಿನಾಂಕ ನೀಡುವುದು, ಸಹಕಾರಿ ಸಂಘಗಳು, ಮುಡಾ ಅಧಿಕಾರಿಗಳ ಸಂಬಂಧಿಕರು, ಸಹವರ್ತಿಗಳ ಬ್ಯಾಂಕ್ ಖಾತೆಗಳ ಮುಖಾಂತರ ಹಣ ವರ್ಗಾವಣೆ ನಡೆದಿದೆ. ಈ ಹಣದಿಂದ ಮುಡಾ ಅಧಿಕಾರಿಗಳ ಸಂಬಂಧಿಕರ ಹೆಸರಲ್ಲಿ ಅಕ್ರಮವಾಗಿ ಹಂಚಿಕೆಯಾದ ಕೆಲ ಮುಡಾ ನಿವೇಶನಗಳನ್ನು ಖರೀದಿಸಿರುವುದು ತನಿಖೆಯಲ್ಲಿ ಬಯಲಾಗಿದೆ.

ಲೋಕಾ ಕೇಸ್ ಬಳಿಕ ಇಡಿ ಎಂಟ್ರಿ

ಲೋಕಾಯುಕ್ತ ಕಳೆದ ಸೆಪ್ಟೆಂಬರ್​ನಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಸಹೋದರ ಬಿ.ಎಂ ಮಲ್ಲಿಕಾರ್ಜುನಸ್ವಾಮಿ ಮತ್ತು ಇತರರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಈ ಬೆಳವಣಿಗೆ ಬಳಿಕ ಇ.ಡಿ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್) ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿತ್ತು.

ಮುಟ್ಟುಗೋಲಾದ ಆಸ್ತಿ

* 100 ಕೋಟಿ ರೂ.ಮೌಲ್ಯದ 92 ಮುಡಾ ನಿವೇಶನ

* ಈ ಹಿಂದೆ 300 ಕೋಟಿ ರೂ. ಮೌಲ್ಯದ 160 ಸೈಟ್

* ಒಟ್ಟಾರೆ 400 ಕೋಟಿ ಮೌಲ್ಯದ 252 ಸೈಟ್ ಸೀಜ್

ತನಿಖೆಯಲ್ಲಿ ದೃಢಪಟ್ಟಿದ್ದು?

* ಅನರ್ಹ ಫಲಾನುಭವಿಗಳನ್ನು ಗುರುತಿಸುವುದು

* ನಕಲಿ ಹಾಗೂ ಅಪೂರ್ಣ ದಾಖಲೆಗಳು ಬಳಕೆ

* ನೇರವಾಗಿ ಸರ್ಕಾರಿ ಆದೇಶ ಉಲ್ಲಂಘಿಸಿ ರುವುದು

* ಕೆಲವೆಡೆ ಹಂಚಿಕೆ ಪತ್ರದ ಹಿಂದಿನ ದಿನಾಂಕವಿದೆ

* ಹಂಚಿಕೆಯಲ್ಲಿ ಅಧಿಕಾರಿಗಳಿಗೆ ಹಣ ಸಂದಾಯ

* ಆ ಹಣದಲ್ಲಿ ಸಂಬಂಧಿ ಹೆಸರಲ್ಲಿ ಸೈಟ್ ಖರೀದಿ