ಜಿಲ್ಲೆ

'ತಾಕತ್ತಿದ್ರೆ ಮೈಸೂರಿನಲ್ಲಿ ಚುನಾವಣೆಗೆ ಬನ್ನಿ'... ಮಾಜಿ ಸಿಎಂಗೆ ಸವಾಲು ಹಾಕಿದ ಸಂಸದ ಶ್ರೀನಿವಾಸ್ ಪ್ರಸಾದ್

theerthaswamy

 ಚಾಮರಾಜನಗರ: ತಾಕತ್ತಿದ್ರೆ ಮೈಸೂರಿನಲ್ಲಿ ಚುನಾವಣೆಗೆ ಬನ್ನಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ಸಂಸದ ಶ್ರೀನಿವಾಸ್ ಪ್ರಸಾದ್ ಬಹಿರಂಗ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಅಲೆಯುತ್ತಿದ್ದು, ಜಮೀರ್ ಕಾಲಿಡಿದುಕೊಂಡು ಚಾಮರಾಜಪೇಟೆಗೆ ಹೋಗುತ್ತಿದ್ದಾರೆ. ನಿಮಗೆ ಧೈರ್ಯ ಇದ್ದರೆ ಮೈಸೂರಿಗೆ ಬಂದು ಪಕ್ಷವನ್ನ ಸಂಘಟನೆ ಮಾಡಿ ಚುನಾವಣೆ ಗೆಲ್ಲಿ. ಮೊದಲು ಮುಖ್ಯಮಂತ್ರಿಗಳಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನೀವು ಮುಖ್ಯಮಂತ್ರಿಯಾಗಿ ಎರಡೆರಡು ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುತ್ತೀರ ಎಂದು ಚಾಮರಾಜನಗರದಲ್ಲಿ ಮಾಜಿ ಸಿಎಂ ವಿರುದ್ಧ ಸಂಸದ ಶ್ರೀನಿವಾಸ್ ಪ್ರಸಾದ್ ಗುಡುಗಿದ್ದಾರೆ. ಬಿಜೆಪಿಯನ್ನ‌‌ ಎದುರಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಅಮೇಥಿ ಕ್ಷೇತ್ರದಲ್ಲಿ ಸೋತು ಸುಣ್ಣವಾಗಿದ್ದಾರೆ.

ಕೇವಲ ಸೋನಿಯಾ ಗಾಂಧಿ ಮಾತ್ರ ಉತ್ತರ ಪ್ರದೇಶದಲ್ಲಿ ಗೆದ್ದಿದ್ದಾರೆ. ರಾಹುಲ್ ಗಾಂಧಿ ಕೇರಳಕ್ಕೆ ಪಲಾಯಾನ ಮಾಡಿದ್ದು, ದೇಶದಲ್ಲಿ ನೆಲೆ ಇಲ್ಲದಂತಾಗಿದೆ. ಉತ್ತರ ಪ್ರದೇಶದಲ್ಲಿ ನಿಮ್ಮ ಪಾರ್ಟಿಯನ್ನ ಬಲಪಡಿಸಿ, ಕೇರಳದಲ್ಲಿ ಅಲ್ಲ ಎನ್ನುವ ಮೂಲಕ ಕಾಂಗ್ರೆಸ್ ನಾಯಕರಿಗೆ ಸಂಸದ ಶ್ರೀನಿವಾಸ್ ಪ್ರಸಾದ್ ತಿರುಗೇಟು ನೀಡಿದರು.