ಜಿಲ್ಲೆ

ಅಶ್ಲೀಲ ವಿಡಿಯೋ ಪ್ರಕರಣ: ಜೆಡಿಎಸ್‌ನಿಂದ ಸಂಸದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಶಿವಮೊಗ್ಗ: ಅಶ್ಲೀಲ ವಿಡಿಯೋ ಪ್ರಕರಣದ ಆರೋಪ ಹೊತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿಯ ನಾಯಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಬಳಿ ಈ ಬಗ್ಗೆ ಭಾನುವಾರವೇ ಚರ್ಚೆ ನಡೆಸಿದ್ದೆ. ದೇವೇಗೌಡರೇ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ ಎಂದರು.

ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಕೇವಲ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಕ್ಕೆ ಮುಜುಗರ ತರುವಂಥದ್ದಲ್ಲ, ಇಡೀ ಸಮಾಜಕ್ಕೆ ಮುಜುಗರ ತರುವಂಥದ್ದಾಗಿದೆ. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಎಸ್‌ಐಟಿಗೆ ವಹಿಸಿದೆ. ತನಿಖಾ ವರದಿ ಬಂದ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದರು.

ನಮ್ಮ ಕುಟುಂಬ ಮತ್ತು ಎಚ್.ಡಿ.ರೇವಣ್ಣ ಕುಟುಂಬದವರು ಬೇರೆ ಬೇರೆ ಇದ್ದೇವೆ. ಇನ್ನು ಪ್ರಜ್ವಲ್ ಪ್ರಕರಣದಲ್ಲಿ ದೇವೇಗೌಡರು ಮತ್ತು ನನ್ನ ಕುಟುಂಬವನ್ನು ಎಳೆದು ತರಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು. ಜತೆಗೆ ತಪ್ಪಿತಸ್ಥರು ಯಾರೇ ಇದ್ದರೂ ಶಿಕ್ಷೆ ಅನುಭವಿಸಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಎಲ್ಲವೂ ತನಿಖೆಯಾಗಬೇಕು. ಅದರಲ್ಲಿ ನಾನಾಗಲಿ, ದೇವೇಗೌಡರಾಗಲಿ ಯಾವುದೇ ರೀತಿ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ. ಇಂತಹ ಕೃತ್ಯಗಳು ನಡೆಯಬಾರದು ಎಂದರು.

ನಾನು ಸಿಎಂ ಆಗಿದ್ದಾಗ ಮತ್ತು ದೇವೇಗೌಡರು ಪ್ರಧಾನಿ ಆಗಿದ್ದಾಗಲೂ ಸಾವಿರಾರು ಹೆಣ್ಣುಮಕ್ಕಳು ಕಷ್ಟ, ಸಮಸ್ಯೆಗಳಿಗಾಗಿ ಬಂದಿದ್ದಾರೆ. ಅವರನ್ನು ಅತ್ಯಂತ ಗೌರವದಿಂದ ಕಂಡಿದ್ದೇವೆ. ಪೆನ್‌ಡ್ರೈವ್ ಪ್ರಕರಣದಿಂದ ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ. ತನಿಖೆ ಪಾರದರ್ಶಕವಾಗಿ ನಡೆಯಬೇಕು. ಇದರಲ್ಲಿ ರಾಜಕೀಯ ಸಂಚು ಇರುವುದೂ ಬಯಲಾಗಲಿದೆ ಎಂದು ತಿಳಿಸಿದರು.