ಕಂಪ್ಲಿ ಸಮೀಪದ ಸುಗ್ಗೇನಹಳ್ಳಿಯ ಮೌಲಾಲಿ ಮಸೀದಿಯಲ್ಲಿ ಕೂಡಿಸಿದ ಪೀರಲು ದೇವರುಗಳು. 
ಜಿಲ್ಲೆ

ಸಂಚಲನ ಮೂಡಿಸಿದ ರಫಿಕ್ ತಾತನ ಹೇಳಿಕೆ

ರುದ್ರಪ್ಪ ವಾಲಿ

ಕಂಪ್ಲಿ: ಮೊಹರಂ ಪ್ರಯುಕ್ತ, ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ಮೌಲಾಲಿತಾತನ ಮಸೀದಿಯ ಅಲಾಯಿಕುಣಿಯಲ್ಲಿ ಶುಕ್ರವಾರ ತಡರಾತ್ರಿ ಅಗ್ನಿಕುಂಡ ಹಾಯುವ ಕಾರ್ಯಕ್ರಮದಲ್ಲಿ, ಮೌಲಾಲಿ ಪೀರಲ ದೇವರ ಕುದುರೆ ಹಿಡಿದ ಟಿ.ರಫಿಕ್‌ಸಾಹೇಬ್ ತಾತ ನೀಡಿದ ಹೇಳಿಕೆಗಳು ಕೃಷಿಕ ವಲಯದಲ್ಲಿ ಸಂಚಲನ ಮೂಡಿಸಿದೆ. ತಾತನ ಹೇಳಿಕೆಗಳು ನಿಜವಾಗುತ್ತದೆ ಎನ್ನುವ ಬಲವಾದ ನಂಬಿಕೆ ಗ್ರಾಮಸ್ಥರಲ್ಲಿದೆ.

ಇದನ್ನೂ ಓದಿ: ಬೂದಾಳ್ ಬನಶಂಕರಿ ದೇವಿಯ ಅಗ್ನಿಕುಂಡ ಜಾತ್ರೆ
ಅಗ್ನಿಕುಂಡ ಪ್ರವೇಶ ಸಂದರ್ಭದಲ್ಲಿ ಮೌಲಾಲಿ ರೂಪದ ರಫಿಕ್‌ತಾತ ನಾಲ್ಕು ಹೇಳಿಕೆ ನೀಡಿದ್ದು, ನರ ಮಾನವನ ಅಹಂಕಾರಕ್ಕೆ ಭೂತಾಯಿ ಬಾಯಿ ತೆಗೆದಳು ಎನ್ನುವ ಹೇಳಿಕೆಗೆ ಮನುಷ್ಯನ ಹಸ್ತಕ್ಷೇಪದಿಂದಾಗಿ(ಕೈಗಾರಿಕೆಗಳಿಂದ) ಪರಿಸರ ಮಾಲಿನ್ಯಗೊಂಡು ದುಷ್ಪರಿಣಾಮ ಬೀರಲಿದೆ ಎಂದು, ಹಿಂಗಾರು ಮಳೆಗೆ ಬಲತ್ಕಾರ ಹೆಚ್ಚಾಯಿತು ಎನ್ನುವ ಎರಡನೇ ಹೇಳಿಕೆಗೆ ಇನ್ನು ಮೇಲೆ ಉತ್ತಮ ಮಳೆ ಬೀಳಲಿದ್ದು ಕೆರೆ, ಬಾವಿ, ಹಳ್ಳಕೊಳ್ಳಗಳು ತುಂಬಿ ಹರಿಯಲಿವೆ.

ಮನುಷ್ಯರಿಗೆ ರೋಗ

ಕೆಂಪು ಕುದುರೆ ಪೂರ್ವ ದಿಕ್ಕಿಗೆ ಮುಖ ಮಾಡಿ ದಕ್ಷಿಣ ದಿಕ್ಕಿಗೆ ಹಾರಿತು ಎನ್ನುವ ಮೂರನೇ ಹೇಳಿಕೆಯು ಪೂರ್ವ, ದಕ್ಷಿಣ ದಿಕ್ಕಿನ ಬೆಳೆ ಉತ್ತಮ ಇಳುವರಿ ದೊರಕಲಿದೆ ಎಂದು, ಗ್ರಾಮ ದೇವತೆ ಚಾಮುಂಡಿ ಅವತಾರ ತಾಳಿ ತಾಂಡವ ಆಡಿದಳು ಎನ್ನುವ ನಾಲ್ಕನೇ ಹೇಳಿಕೆಗೆ ಮನುಷ್ಯರಿಗೆ ರೋಗ, ರುಜಿನ ಕಾಟ ಹೆಚ್ಚಾಗಲಿದೆ ಎನ್ನುವ ಅರ್ಥ ತರುತ್ತದೆ ಎಂದು ಗ್ರಾಮದ ರೈತ ಎಸ್.ಆರ್.ರಾಮನಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಅಲ್ಲದೆ, ಕಳೆದ ವರ್ಷ ತಾತನ ಹೇಳಿಕೆಯಂತೆ ಮೆಣಸಿನಕಾಯಿ ಬೆಲೆ ಗಗನಕ್ಕೇರಿದ್ದನ್ನು ಇಲ್ಲಿ ಸ್ಮರಿಸಿಕೊಂಡರು.