ಜಿಲ್ಲೆ

ಮಗಳನ್ನೇ ಹತ್ಯೆಗೈದ ತಾಯಿ

ಕಾರ್ಕಳ: ತಾಯಿಯೊಬ್ಬಳು ತನ್ನ ಮಗಳನ್ನೇ ಹತ್ಯೆಗೈದಿರುವ ಘಟನೆ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಕಾನಂಗಿ ಎಂಬಲ್ಲಿ ನಡೆದಿದೆ. ಶಿಫನಾಜ್ (17) ಹತ್ಯೆಯಾದ ಯುವತಿ.

ಸೆ.20ರಂದು ಶಿಫನಾಜ್ ತನ್ನ ಸ್ನೇಹಿತನನ್ನು ಭೇಟಿಯಾಗಲು ಉಡುಪಿಗೆ ಹೋಗಿ ಬರುವುದಾಗಿ ತಾಯಿಯಲ್ಲಿ ಹೇಳಿದ್ದು, ಅದಕ್ಕೆ ತಾಯಿ ಗುಲ್ಟಾರ್ ಬಾನು ವಿರೋಧಿಸಿದ್ದರು. ಇದರಿಂದ ತಾಯಿ- ಮಗಳ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಪ್ರಕರಣ ದಾಖಲು:

ಶಿಫನಾಜ್ ಸೆ.20ರಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿಆಕೆಯ ತಂದೆ ಶೇಖ್ ಮುಸ್ತಾಫ್ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೋಸ್ಟ್ ಮಾರ್ಟಂನಲ್ಲಿ ಸತ್ಯ ಬಯಲು

ಶಿಫನಾಜ್ ಸಾವು ಆತ್ಮಹತ್ಯೆಯಲ್ಲ, ಕುತ್ತಿಗೆ ಹಿಡಿದು ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬ ವಿಷಯ ಪೋಸ್ಟ್‌ಮಾರ್ಟಂನಲ್ಲಿ ಹೊರ ಬಿದ್ದಿದೆ. ತಾಯಿ ಗುಲ್ಟಾರ್ ಬಾನು ಅವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು ಈ ವೇಳೆ ತಾನು ಕೊಲೆ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಗುರುವಾರ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಂಗಳೂರು ಜೈಲಿಗೆ ಕಳುಹಿಸಲಾಗಿದೆ.